ADVERTISEMENT

ಅಸ್ಸಾಂ | ಹಿಂಸಾಚಾರಕ್ಕೆ ತಿರುಗಿದ ವಕ್ಫ್ ವಿರೋಧಿ ಪ್ರತಿಭಟನೆ: ಲಾಠಿ ಪ್ರಹಾರ

ಪಿಟಿಐ
Published 14 ಏಪ್ರಿಲ್ 2025, 2:56 IST
Last Updated 14 ಏಪ್ರಿಲ್ 2025, 2:56 IST
   

ಗುವಾಹಟಿ: ದಕ್ಷಿಣ ಅಸ್ಸಾಂನ ಕ್ಯಾಚರ್ ಜಿಲ್ಲೆಯ ಸಿಲ್ಚಾರ್ ಪಟ್ಟಣದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾನುವಾರ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದಿದ್ದು, ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಲಾಠಿ ಪ್ರಹಾರ ನಡೆಸಿವೆ.

ಕೆಲವು ಪ್ರತಿಭಟನಾಕಾರರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಕನಿಷ್ಠ ಬಲಪ್ರಯೋಗ ಮಾಡಿದವು ಎಂದು ಕ್ಯಾಚರ್ ಎಸ್‌ಪಿ ನೋಮಲ್ ಮಹಾಟ್ಟಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಆದರೆ ಕಾನೂನು ಕೈಗೆತ್ತಿಕೊಳ್ಳಲು ಯತ್ನಿಸಿದ ಕೆಲವು ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಲ್ಲು ತೂರಾಟದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ.

ADVERTISEMENT

ಅಸ್ಸಾಂನಲ್ಲಿ ಸುಮಾರು ಶೇ 40ರಷ್ಟು ಮುಸ್ಲಿಂ ಜನಸಂಖ್ಯೆ ಇದ್ದರೂ, ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಯಾವುದೇ ಪ್ರತಿಭಟನೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಸಿಲ್ಚಾರ್‌ನಲ್ಲಿ ಭಾನುವಾರ ನಡೆದ ಪ್ರತಿಭಟನೆಗಳನ್ನು ಖಂಡಿಸಿದ ಶರ್ಮಾ, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಿಷೇಧಾಜ್ಞೆ ಜಾರಿ:

ಘಟನೆಯ ಬಳಿಕ ಹಿಂಸಾಚಾರವನ್ನು ತಡೆಗಟ್ಟುವ ಪ್ರಯತ್ನದ ಭಾಗವಾಗಿ, ಕ್ಯಾಚರ್ ಜಿಲ್ಲಾ ಆಯುಕ್ತ ಮೃದುಲ್ ಯಾದವ್, ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ, ಪೂರ್ವಾನುಮತಿ ಇಲ್ಲದೇ 5 ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಸೇರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.