ADVERTISEMENT

ಚೀನಾದ ಎರಡು ಲಸಿಕೆಗಳು ಡೆಲ್ಟಾ ವಿರುದ್ಧ ಪರಿಣಾಮಕಾರಿಯಲ್ಲ: ಚೀನಾ ಸಂಶೋಧಕರು

ರಾಯಿಟರ್ಸ್
Published 25 ಜೂನ್ 2021, 7:18 IST
Last Updated 25 ಜೂನ್ 2021, 7:18 IST
ಚೀನಾದಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನ (ಎಎಫ್‌ಪಿ ಚಿತ್ರ)
ಚೀನಾದಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನ (ಎಎಫ್‌ಪಿ ಚಿತ್ರ)   

ಬೀಜಿಂಗ್‌: ಚೀನಾ ಅಭಿವೃದ್ಧಿಪಡಿಸಿರುವ ಎರಡು ಲಸಿಕೆಗಳಿಂದ ಪ್ರೇರಿತವಾದ ಪ್ರತಿಕಾಯಗಳು ಕೊರೊನಾ ವೈರಸ್‌ನ ಡೆಲ್ಟಾ ತಳಿಯ ವಿರುದ್ಧ ಪರಿಣಾಮಕಾರಿಯಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಆದರೆ, ಕೊರೊನಾ ವೈರಸ್‌ನ ಇತರ ತಳಿಗಳ ವಿರುದ್ಧ ಆ ಎರಡು ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲವು, ಡೆಲ್ಟಾ ವಿರುದ್ಧವೂ ತಕ್ಕ ಮಟ್ಟಿಗೆ ರಕ್ಷಣೆಯನ್ನೂ ನೀಡಬಲ್ಲವು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ತಳಿಯು ತನ್ನ ಪ್ರಸರಣ ತೀವ್ರತೆಯೊಂದಿಗೆ ಜಾಗತಿಕವಾಗಿ ವೇಗವಾಗಿ ಹರಡುತ್ತಿದೆ. ಜೊತೆಗೆ, ಪ್ರಬಲವಾಗಿ ರೂಪಾಂತರವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಕಳೆದ ವಾರ ಎಚ್ಚರಿಸಿದ್ದರು.

‘ಚೀನಾ ಸೆಂಟ್ರಲ್‌ ಟೆಲಿವಿಷನ್‌’ನಲ್ಲಿ ಗುರುವಾರ ಪ್ರಕಟವಾದ ಸಂದರ್ಶನದಲ್ಲಿ ಚೀನಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಮಾಜಿ ಸಹ ನಿರ್ದೇಶಕ ಫೆಂಗ್‌ ಝಿಜ್ಯಾನ್‌ ಮಾತನಾಡಿದ್ದಾರೆ. ಆದರೆ, ಲಸಿಕೆಗಳು ಡೆಲ್ಟಾ ವಿರುದ್ಧ ಹೆಚ್ಚು ಪರಿಣಾಮಕಾರಿಯಲ್ಲ ಎಂಬ ತಮ್ಮ ವಾದದ ಬಗ್ಗೆ ಹೆಚ್ಚು ವಿವರಣೆ ನೀಡಿಲ್ಲ.

ADVERTISEMENT

ಫೆಂಗ್‌ ಅವರು ಅ ಎರಡು ಲಸಿಕೆಗಳು ಯಾವುದು ಎಂದೂ ಹೆಸರಿಲ್ಲ. ಆದರೆ, ಕೊರೊನಾ ವೈರಸ್‌ ಅನ್ನು ನಿಷ್ಕ್ರಿಯಗೊಳಿಸಿ ತಯಾರಿಸಲಾದ ಲಸಿಕೆಗಳು ಎಂದಷ್ಟೇ ಅವರು ಹೇಳಿದ್ದಾರೆ.

ಚೀನಾದ ಸಾಮೂಹಿಕ ಲಸಿಕೀಕರಣ ಯೋಜನೆ ಅಡಿಯಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಏಳು ಲಸಿಕೆಗಳಲ್ಲಿ ಐದು ಲಸಿಕೆಗಳು ನಿಷ್ಕ್ರಿಯ ಮಾದರಿಯ ಲಸಿಕೆಗಳಾಗಿವೆ. ಇದರಲ್ಲಿ ಸಿನೋವಾಕ್ ಬಯೋಟೆಕ್ (ಎಸ್‌ವಿಎಒ) ಮತ್ತು ಸಿನೊಫಾರ್ಮ್‌ನ ಲಸಿಕೆಗಳೂ ಇವೆ. ಬ್ರೆಜಿಲ್, ಬಹ್ರೇನ್ ಮತ್ತು ಚಿಲಿಯಲ್ಲಿ ಸಿನೊಫಾರ್ಮ್‌ ಅನ್ನು ಬಳಸಲಾಗುತ್ತಿದೆ.

ಡೆಲ್ಟಾ ರೂಪಾಂತರ ತಳಿಯಿಂದಾಗಿ ದಕ್ಷಿಣ ಗುವಾಂಗ್‌ಡಾಂಗ್ ಪ್ರಾಂತ್ಯದ ಮೂರು ನಗರಗಳಲ್ಲಿ ಸೋಂಕು ಪ್ರಕರಣಗಳು ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿ ಮೇ 21 ಮತ್ತು ಜೂನ್ 21 ರ ನಡುವೆ ಸ್ಥಳೀಯವಾಗಿ 170 ಕೋವಿಡ್‌ ಪ್ರಕರಣಗಳು ಕಂಡು ಬಂದಿವೆ. ಆದರೆ, ಇದರಲ್ಲಿ ಡೆಲ್ಟಾ ಮಾದರಿಯ ಪ್ರಕರಣಗಳು ಎಷ್ಟು ಎಂದು ಖಚಿತವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.