ADVERTISEMENT

ಕ್ರಿಸ್ಮಸ್ ವೇಳೆ ಕ್ರೈಸ್ತರ ಮೇಲೆ ದಾಳಿ: ರಕ್ಷಣೆ ನೀಡಲು ಮೋದಿಗೆ ಬಿಷಪ್ ಮನವಿ

ಪಿಟಿಐ
Published 25 ಡಿಸೆಂಬರ್ 2025, 7:09 IST
Last Updated 25 ಡಿಸೆಂಬರ್ 2025, 7:09 IST
<div class="paragraphs"><p>ಆರ್ಚ್ ಬಿಷಪ್ ಆ್ಯಂಡ್ರ್ಯೂಸ್ ತಾಯತ್ತ್ ಹಾಗೂ ಪ್ರಧಾನಿ ಮೋದಿ</p></div>

ಆರ್ಚ್ ಬಿಷಪ್ ಆ್ಯಂಡ್ರ್ಯೂಸ್ ತಾಯತ್ತ್ ಹಾಗೂ ಪ್ರಧಾನಿ ಮೋದಿ

   

ನವದೆಹಲಿ: ದೇಶದಾದ್ಯಂತ ಕಠಿಣವಾಗಿ ಕಾನೂನು ಜಾರಿ ಮಾಡಬೇಕು, ಕ್ರೈಸ್ತ ಸಮುದಾಯಕ್ಕೆ ರಕ್ಷಣೆ ನೀಡಬೇಕು ಎಂದು ಕೋರಿ ‘ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಭೆ’ಯ (ಸಿಬಿಸಿಐ) ಅಧ್ಯಕ್ಷ ಆರ್ಚ್ ಬಿಷಪ್ ಆ್ಯಂಡ್ರ್ಯೂಸ್ ತಾಯತ್ತ್ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿಯುಂಟು ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಅವರು ಮನವಿ ಮಾಡಿದ್ದಾರೆ.

ADVERTISEMENT

ಅವರು ಮಾಡಿರುವ ವಿಡಿಯೊ ಮನವಿಯನ್ನು ಸಿಬಿಸಿಐ ಬಿಡುಗಡೆ ಮಾಡಿದ್ದು, ‘ಕ್ರೈಸ್ತರ ಮೇಲಿನ ದಾಳಿಯು ಏರಿಕೆಯಾಗುತ್ತಿರುವುದು ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ’ ಎಂದು ಹೇಳಿದ್ದಾರೆ. ಅಲ್ಲದೆ ಇಂತಹ ಘಟನೆಗಳು ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಭಾರತದ ಸಂವಿಧಾನದ ಆತ್ಮಕ್ಕೆ ತೀವ್ರ ಗಾಯವನ್ನುಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

‘ಕ್ರಿಸ್ಮಸ್, ಕ್ರಿಸ್ಮಸ್ ಕರೋಲ್‌ಗಳು ಹಾಗೂ ಪ್ರಾರ್ಥನೆಗಳು ಶಾಂತಿ, ಸಂತೋಷ, ಆಶಾಭಾವನೆ ಹಾಗೂ ಸಾಮರಸ್ಯವನ್ನು ಹೊಂದಿವೆ. ಆದರೆ ಇಂದು ದೇಶದ ಹಲವು ಭಾಗಗಳಲ್ಲಿ ಕ್ರೈಸ್ತರ ಮೇಲೆ ನಡೆಯುತ್ತಿರುವ ದಾಳಿಗಳು ಆಘಾತವುಂಟು ಮಾಡಿದೆ. ಕ್ರಿಸ್ಮಸ್‌ನ ಈ ಪವಿತ್ರ ಋತುವಿನಲ್ಲಿ ಈ ಬಗ್ಗೆ ಕೇಳಲು ನೋವಾಗುತ್ತಿದೆ’ ಎಂದು ಆರ್ಚ್‌ಬಿಷಪ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಶಾಂತಿಯುತವಾಗಿ ಕರೊಲ್ ಹಾಡುತ್ತಿದ್ದವರ ಮೇಲೆ, ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವವರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಇದು ತಮ್ಮ ನಂಬಿಕೆಯನ್ನು ಶಾಂತಿಯುತವಾಗಿ ಆಚರಿಸಲು ಬಯಸುವ, ಕಾನೂನು ಪಾಲಿಸುವ ನಾಗರಿಕರಲ್ಲಿ ಭಯ ಮತ್ತು ಯಾತನೆಯನ್ನು ಉಂಟುಮಾಡುತ್ತದೆ’ ಎಂದು ಅವರು ಹೇಳಿದ್ದಾರೆ.

‘ಇಂತಹ ಘಟನೆಗಳು ನಮ್ಮ ಸಂವಿಧಾನದ ಚೈತನ್ಯವನ್ನು ತೀವ್ರವಾಗಿ ಘಾಸಿಗೊಳಿಸುತ್ತವೆ. ಈ ದ್ವೇಷ ಮತ್ತು ಹಿಂಸಾಚಾರದ ಕೃತ್ಯಗಳನ್ನು ನಾನು ಖಂಡಿಸುತ್ತೇನೆ. ನಮ್ಮ ಸಮಾಜವನ್ನು ವಿಭಜಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟವರನ್ನು ಆಗ್ರಹಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ಕಟ್ಟುನಿಟ್ಟಾಗಿ ಕಾನೂನು ಜಾರಿಯನ್ನು ಖಚಿತಪಡಿಸಿಕೊಳ್ಳಲು, ದೇಶದಾದ್ಯಂತ ಕ್ರೈಸ್ತ ಸಮುದಾಯಗಳಿಗೆ ರಕ್ಷಣೆ ನೀಡಲು ನಾನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರರಿಗೆ ವಿನಮ್ರವಾಗಿ ಮನವಿ ಮಾಡುತ್ತೇನೆ. ಇದರಿಂದಾಗಿ ಸಾಮರಸ್ಯ ಮತ್ತು ಪರಸ್ಪರ ಗೌರವದ ವಾತಾವರಣದಲ್ಲಿ ಕ್ರಿಸ್ಮಸ್ ಆಚರಿಸಬಹುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.