ADVERTISEMENT

ಜಮ್ಮು–ಕಾಶ್ಮೀರ: 30 ಕೆ.ಜಿ ನಿಷೇಧಿತ ವಸ್ತು ಜಪ್ತಿ

ಉರಿ ಸೆಕ್ಟರ್‌ನಲ್ಲಿ ಭದ್ರತಾಪಡೆಗಳ ಕಾರ್ಯಾಚರಣೆ

ಪಿಟಿಐ
Published 3 ಅಕ್ಟೋಬರ್ 2021, 11:26 IST
Last Updated 3 ಅಕ್ಟೋಬರ್ 2021, 11:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ₹ 25 ಕೋಟಿ ಮೌಲ್ಯದ 30 ಕೆ.ಜಿಯಷ್ಟು ನಿಷೇಧಿತ ವಸ್ತುವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

‘ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಕೆಲವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಭದ್ರತಾಪಡೆಗಳು ಶನಿವಾರ ಗಮನಿಸಿ, ಶೋಧ ಕಾರ್ಯ ಕೈಗೊಂಡವು. ಡ್ರಗ್ಸ್‌ ಹೋಲುವಂತಹ ವಸ್ತುವನ್ನು ಬೀಳಿಸಿದ್ದನ್ನು ಪತ್ತೆ ಹಚ್ಚಿ, ಆ ವಸ್ತುವನ್ನು ವಶಪಡಿಸಿಕೊಳ್ಳಲಾಯಿತು’ ಎಂದು ಹಿರಿಯ ಎಸ್ಪಿ ರಯೀಸ್‌ ಮೊಹಮ್ಮದ್‌ ಭಟ್‌ ಸುದ್ದಿಗಾರರಿಗೆ ತಿಳಿಸಿದರು.

‘ಎಲ್‌ಒಸಿಯ ಭಾರತದ ಗಡಿಯೊಳಗೆ ಈ ಮಾದಕವಸ್ತುವಿನ ಕಳ್ಳಸಾಗಣೆಗೆ ಪೆಡ್ಲರ್‌ಗಳು ಯತ್ನಿಸುತ್ತಿದ್ದರು. ಭದ್ರತಾಪಡೆಗಳು ಕಾರ್ಯಾಚರಣೆಗೆ ಮುಂದಾದ ಕೂಡಲೇ ಅವರು ಅಲ್ಲಿಂದ ಕಾಲ್ಕಿತ್ತರು’ ಎಂದೂ ಭಟ್‌ ಹೇಳಿದರು.

ADVERTISEMENT

‘ಘಟನಾ ಸ್ಥಳದಲ್ಲಿ ಒಂದು ಟೋಪಿ, ಎರಡು ಬ್ಯಾಕ್‌ಪ್ಯಾಕ್‌ಗಳು, ಎರಡು ಗೋಣಿಚೀಲಗಳನ್ನು ಸಹ ಜಪ್ತಿ ಮಾಡಲಾಗಿದೆ’.

‘ಪಾಕಿಸ್ತಾನದ ಗುರುತುಗಳನ್ನು ಹೊಂದಿರುವ, ಒಟ್ಟು 25–30 ಕೆ.ಜಿ ತೂಕದ ಎರಡು ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಮಾದಕವಸ್ತು ಯಾವುದು ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದರು.

‘ಇತ್ತೀಚೆಗ ಗಡಿಯಲ್ಲಿ ಭಾರಿ ಪ್ರಮಾಣದ ಡ್ರಗ್ಸ್‌ ಪತ್ತೆ ಹಚ್ಚಲಾಗಿದೆ. ಇದು ಪಾಕಿಸ್ತಾನ ಮೂಲದ ಮಾದಕವಸ್ತು ಜಾಲ ಹಾಗೂ ಭಯೋತ್ಪಾದಕರ ನಡುವಿನ ನಂಟನ್ನು ಸೂಚಿಸುತ್ತದೆ. ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗುವ ಪಿತೂರಿಯ ಭಾಗವಾಗಿ ಮಾದಕವಸ್ತುಗಳ ಸಾಗಾಟ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.