ADVERTISEMENT

ರಾಜ್ಯವೊಂದಕ್ಕೆ ಪ್ರತ್ಯೇಕ ಸಂವಿಧಾನ ಬೇಡ: CJI ಬಿ.ಆರ್‌. ಗವಾಯಿ

ಪಿಟಿಐ
Published 28 ಜೂನ್ 2025, 11:32 IST
Last Updated 28 ಜೂನ್ 2025, 11:32 IST
ಬಿ.ಆರ್‌.ಗವಾಯಿ
ಬಿ.ಆರ್‌.ಗವಾಯಿ   

ನಾಗ್ಪುರ: ‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ದೇಶದ ಎಲ್ಲರಿಗೂ ಅನ್ವಯವಾಗುವಂಥ ಒಂದೇ ಸಂವಿಧಾನ ಬೇಕು ಎಂದು ಕನಸು ಕಂಡಿದ್ದರೇ ಹೊರತು ರಾಜ್ಯವೊಂದಕ್ಕೆ ಪ್ರತ್ಯೇಕ ಸಂವಿಧಾನ ಇರಬೇಕು ಎನ್ನುವುದರ ಪರವಾಗಿ ಅವರು ಎಂದೂ ಇರಲಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಅವರು ಅಭಿಪ್ರಾಯಪಟ್ಟರು.

ಗವಾಯಿ ಅವರು ಇಲ್ಲಿ ನಿರ್ಮಿಸಲಾಗಿರುವ ‘ಸಂವಿಧಾನದ ಪ್ರಸ್ತಾವನೆ ಉದ್ಯಾನ’ವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.

‘ಸಂವಿಧಾನದ 370ನೇ ವಿಧಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಯುತ್ತಿದ್ದ ವೇಳೆ, ‘ಎಲ್ಲರಿಗೂ ಅನ್ವಯವಾಗುವ ಒಂದೇ ಸಂವಿಧಾನ ಬೇಕು’ ಎನ್ನುತ್ತಿದ್ದ ಅಂಬೇಡ್ಕರ್‌ ಅವರ ಮಾತುಗಳನ್ನು ನಾನು ನೆನಪು ಮಾಡಿಕೊಂಡೆ. ನಾವು ದೇಶವನ್ನು ಒಂದಾಗಿಡಬೇಕು ಎಂದಾದರೆ ನಮಗೆ ಒಂದೇ ಸಂವಿಧಾನ ಬೇಕು’ ಎಂದರು.

ADVERTISEMENT

‘ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ನಮ್ಮ ಸಂವಿಧಾನ ಶಕ್ತವಾಗಿದೆ ಮತ್ತು ಇದು ದೇಶವನ್ನು ಒಗ್ಗೂಡಿಸಿ ಇಡುತ್ತದೆ. ನಮ್ಮ ನೆರೆಯ ದೇಶಗಳ ಸ್ಥಿತಿಯನ್ನೇ ನೋಡಿ. ಅದು ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಶ್ರೀಲಂಕಾ ಇರಬಹುದು. ಭಾರತವು ಯಾವುದೇ ಸವಾಲನ್ನು ಎದುರಿಸಿದರೂ, ದೇಶ ಮಾತ್ರ ಒಗ್ಗಟ್ಟಾಗಿಯೇ ಇತ್ತು’ ಎಂದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಗವಾಯಿ ಅವರು ಸಮರ್ಥಿಸಿಕೊಂಡರು. ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಅಂದಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಗವಾಯಿ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.