ADVERTISEMENT

ಪಂಜಾಬ್ ಸಿಎಂ ಆಗಲು ಸಿದ್ಧರಿರುವ ಭಗವಂತ ಮಾನ್ ಹಳೆಯ ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮಾರ್ಚ್ 2022, 6:00 IST
Last Updated 11 ಮಾರ್ಚ್ 2022, 6:00 IST
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಸಾಧನೆಗೈದ ಮೇಲೆ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ ಮಾನ್ ಬೆಂಬಲಿಗರೆಡೆಗೆ ಕೈಬೀಸಿದರು.
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಸಾಧನೆಗೈದ ಮೇಲೆ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ ಮಾನ್ ಬೆಂಬಲಿಗರೆಡೆಗೆ ಕೈಬೀಸಿದರು.   

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಅಭೂತಪೂರ್ವ ಸಾಧನೆ ಮಾಡಿದ್ದು, 117 ವಿಧಾನಸಭಾ ಕ್ಷೇತ್ರಗಳ ಪೈಕಿ 92ರಲ್ಲಿ ಜಯ ಸಾಧಿಸಿದೆ. ಪಂಜಾಬ್‌ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಭಗವಂತ ಮಾನ್‌ ಅವರ ಹಳೆಯ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕಾಮಿಡಿ ಶೋನಲ್ಲಿ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾನ್ ಅವರು, ಎಂಎಲ್ಎ ಅಥವಾ 'ಮಂತ್ರಿ' (ಸಚಿವರು) ಆಗುವ ಬಯಕೆಯನ್ನು ವ್ಯಕ್ತಪಡಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಅವರು ಟ್ವಿಟರ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ, ವಿದ್ಯಾರ್ಥಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ಮಾನ್ ಅವರನ್ನು, ದೊಡ್ಡವನಾದ ಮೇಲೆ ಏನಾಗುವೆ ಎಂದು ಶಿಕ್ಷಕರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಮಾನ್, ಹೆಚ್ಚಿನ ವಿದ್ಯಾಭ್ಯಾಸ ಪಡೆದರೆ ಅಧಿಕಾರಿಯಾಗುತ್ತೇನೆ, ಇಲ್ಲದಿದ್ದರೆ ಶಾಸಕ, ಸಚಿವನಾಗುತ್ತೇನೆ ಎಂದು ಪಂಜಾಬಿಯಲ್ಲಿ ಉತ್ತರಿಸಿದ್ದಾರೆ. ಈಗ ಅವರು ಮುಖ್ಯಮಂತ್ರಿಯಾಗುವ ಹಾದಿಯಲ್ಲಿರುವಾಗ ಈ ವಿಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ADVERTISEMENT

ರುಪಿನ್ ಶರ್ಮಾ ಅವರು ಭಗವಂತ ಮಾನ್ ಅವರನ್ನು ಅಭಿನಂದಿಸಿದ್ದು, 'ಪ್ರವಾದಿ' ಎಂದು ಬರೆದುಕೊಂಡಿದ್ದಾರೆ.

ಪಂಜಾಬ್‌ನಲ್ಲಿ ಸರ್ಕಾರ ರಚನೆಗೆ ಎಎಪಿ ಸಿದ್ಧವಾಗುತ್ತಿರುವಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ವಿಡಿಯೊ ಕೂಡ ಹರಿದಾಡುತ್ತಿದೆ. 2006 ರ ಮತ್ತೊಂದು ವಿಡಿಯೊದಲ್ಲಿ, ಭಗವಂತ ಮಾನ್ ವೇದಿಕೆ ಮೇಲೆ ಹಾಸ್ಯ ಚಟಾಕಿ ಹಾರಿಸುತ್ತಿರುವ ಕಾರ್ಯಕ್ರಮವೊಂದರಲ್ಲಿ ನವಜೋತ್ ಸಿಂಗ್ ಸಿಧು ಕೂಡ ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್‌ನ ತೀರ್ಪುಗಾರರಲ್ಲಿ ಒಬ್ಬರಾಗಿ ಇನ್ನೊಂದು ಬದಿಯಲ್ಲಿ ಕುಳಿತಿರುವುದು ಕಂಡುಬರುತ್ತದೆ.

‘ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡಲಿದ್ದಾರೆ’ ಎಂದು ಚುನಾವಣೆಗೆ ಮೊದಲೇ ಘೋಷಿಸಿದ್ದ ಕೇಜ್ರಿವಾಲ್‌, ಈ ಸಂಬಂಧ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗೆ ಮುಂದಾದಾಗ ಬರೊಬ್ಬರಿ 21 ಲಕ್ಷ ಜನ (ಶೇ 90ರಷ್ಟು) ಮಾನ್‌ ಪರ ಮತ ಚಲಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.