
ಅಸಾದುದ್ದೀನ್ ಒವೈಸಿ
ಲತೂರ್: ‘ಚುನಾವಣೆ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಹಂಚುವ ಹಣವನ್ನು ಬೇಕಾದರೆ ಪಡೆದುಕೊಳ್ಳಿ, ಹಣ ಪಡೆದಿದ್ದು ತಪ್ಪು ಎನಿಸಿದರೆ ಆ ಹಣವನ್ನು ಶೌಚಾಲಯ ಕಟ್ಟಲು ಬಳಸಿ’ ಎಂದು ಇಲ್ಲಿನ ಮತದಾರರಿಗೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಮಂಗಳವಾರ ಹೇಳಿದ್ದಾರೆ.
ಮುಂಬರಲಿರುವ ಲಾತೂರ್ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಒವೈಸಿ ಮಂಗಳವಾರ ಸಾರ್ವಜನಿಕ ರ‍್ಯಾಲಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು,‘ಎಐಎಂಐಎಂ ಪಕ್ಷವು ಚುನಾವಣಾ ಕಣಕ್ಕಿಳಿಯುತ್ತಿದ್ದಂತೆಯೇ ಎದುರಾಳಿ ಪಕ್ಷಗಳು ಮತದಾರರಿಗೆ ಹಣ ಹಂಚಲು ಶುರು ಮಾಡಿವೆ. ನಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯದಿದ್ದರೆ ಈ ಹಣ ಹಂಚುತ್ತಿರಲಿಲ್ಲ. ನೀವು ಆ ಹಣವನ್ನು ಪಡೆದುಕೊಳ್ಳಿ, ಅದು ಅನೈತಿಕ ಎನಿಸಿದರೆ ಅದೇ ಹಣದಲ್ಲಿ ಶೌಚಾಲಯ ಕಟ್ಟಿಸಿ’ ಎಂದಿದ್ದಾರೆ.
ಇದೇ ವೇಳೆ, ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ಒವೈಸಿ, ‘ಬಿಜೆಪಿಗರು ರಾಷ್ಟ್ರೀಯತೆ ಬಗ್ಗೆ ಮಾತನಾಡುತ್ತಾರೆ. ಆದರೆ, ಇತ್ತ ರೈತರು ಸಾಯುತ್ತಿದ್ದಾರೆ. ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇಷ್ಟೆಲ್ಲಾ ಇದ್ದರೂ ಬಿಜೆಪಿಗರು ಮಾತನಾಡುವುದು ಮಾತ್ರ ಲವ್ ಜಿಹಾದ್ ಬಗ್ಗೆ’ ಎಂದು ಆಕ್ಷೇಪಿಸಿದ್ದಾರೆ.
‘ಮೋದಿ ನನ್ನನ್ನು ಓಲೈಸಲು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ’ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದರೂ ಮೋದಿ ಮಾತ್ರ ಈ ಬಗ್ಗೆ ಮೌನವಾಗಿರುತ್ತಾರೆ ಎಂದೂ ಒವೈಸಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.