ADVERTISEMENT

ಏಕರೂಪ ನಾಗರಿಕ ಸಂಹಿತೆ ಅಗತ್ಯವಿಲ್ಲ: ಅಸಾದುದ್ದೀನ್ ಒವೈಸಿ

​ಪ್ರಜಾವಾಣಿ ವಾರ್ತೆ
Published 1 ಮೇ 2022, 10:48 IST
Last Updated 1 ಮೇ 2022, 10:48 IST
ಅಸಾದುದ್ದೀನ್‌ ಓವೈಸಿ
ಅಸಾದುದ್ದೀನ್‌ ಓವೈಸಿ   

ಔರಂಗಾಬಾದ್‌, ಮಹಾರಾಷ್ಟ್ರ: ‘ಭಾರತಕ್ಕೆಈಗ ಏಕರೂಪ ನಾಗರಿಕತೆ ಸಂಹಿತೆಯ (ಯುಸಿಸಿ) ಅಗತ್ಯವಿಲ್ಲ. ಭಾರತೀಯ ಕಾನೂನು ಆಯೋಗ ಸಹ ಯುಸಿಸಿ ಅಗತ್ಯವಿಲ್ಲವೆಂದು ಹೇಳುತ್ತದೆ’ ಎಂದುಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಹೇಳಿದರು.

ಔರಂಗಾಬಾದ್‌ ಸಂಸದ ಇಮ್ತಿಯಾಜ್‌ ಜಲೀಲ್‌ ಆಯೋಜಿಸಿದ್ದ ಇಫ್ತಿಯಾರ್‌ ಕೂಟಕ್ಕೆ ಆಗಮಿಸಿದ್ದ ಒವೈಸಿ ಹಾಗೂ ಶಿಕ್ಷಣ ತಜ್ಞ ಡಾ. ಗಫಾರ್‌ ಖಾದ್ರಿ ಅವರು, ಬಿಜೆಪಿಯು ತನ್ನ ಆಡಳಿತದ ರಾಜ್ಯಗಳಲ್ಲಿ ತನ್ನದೇ ಆದ ನಾಗರಿಕ ಸಂಹಿತೆಗಳನ್ನು ಜಾರಿಗೆ ತರುತ್ತಿರುವುದರ ಬಗ್ಗೆ ಪ್ರಶ್ನಿಸಿದರು.

ಬಿಜೆಪಿ ಆಡಳಿತವಿರುವ ಗೋವಾ ರಾಜ್ಯದ ಬಗ್ಗೆ ಪ್ರಸ್ತಾಪ ಮಾಡಿದ ಒವೈಸಿ, ‘ದಂಪತಿಗೆ 30 ವರ್ಷವಾದ ನಂತರವೂ ಗಂಡು ಮಕ್ಕಳಾಗದಿದ್ದರೆ, ಹಿಂದೂ ಪುರುಷರು ಮರು ಮದುವೆ ಆಗಬಹುದು ಎಂದು ಗೋವಾ ನಾಗರಿಕ ಸಂಹಿತೆ ತಿಳಿಸುತ್ತದೆ. ಈ ಬಗ್ಗೆ ಬಿಜೆಪಿ ಏನು ಹೇಳುತ್ತದೆ? ಹಿಂದೂ ಅವಿಭಕ್ತ ಕುಟುಂಬಗಳಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಆದರೆ ಈ ವಿನಾಯಿತಿ ಮುಸ್ಲಿಂ, ಸಿಖ್‌ ಹಾಗೂ ಕ್ರಿಶ್ಚಿಯನ್‌ ಸಮುದಾಯಗಳಿಗೆ ಏಕಿಲ್ಲ? ಹಾಗೆಯೇ ಭಾರತದ ಸಂವಿಧಾನವು ಮೇಘಾಲಯ, ಮಿಜೋರಾಂ ಹಾಗೂ ನಾಗಾಲ್ಯಾಂಡ್‌ಗಳ ಸಂಸ್ಕೃತಿಯನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತದೆ. ಇದು ಹಕ್ಕುಗಳ ಉಲ್ಲಂಘನೆ ಅಲ್ಲವೇ?’ ಎಂದು ಪ್ರಶ್ನಿಸಿದರು.

ರಾಷ್ಟ್ರ ನೀತಿಯ ನಿರ್ದೇಶನ ತತ್ವಗಳನ್ನು ಉಲ್ಲೇಖಿಸಿ, ‘ಈ ನೀತಿಯು ಮದ್ಯ ನಿಷೇಧದ ಬಗ್ಗೆ ತಿಳಿಸುತ್ತದೆ. ಆದರೆ ಯಾರೂ ಈ ಬಗ್ಗೆ ಮಾತನಾಡುವುದಿಲ್ಲ.ದೇಶದಲ್ಲಿ ಆರ್ಥಿಕತೆ ಕುಸಿಯುತ್ತಿದೆ. ಕಲ್ಲಿದ್ದಲು ಸಾಗಣೆಗೆ ಪ್ರಯಾಣಿಕರ ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ. ನಿರುದ್ಯೋಗವು ಬೆಳೆಯುತ್ತಿದೆ. ಏಕರೂಪ ನಾಗರಿಕ ಸಂಹಿತೆ ಬದಲು, ಆ ಬಗ್ಗೆ ಗಮನ ಹರಿಸುವುದು ಮುಖ್ಯ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.