ADVERTISEMENT

ರಾಜಸ್ಥಾನ ರಾಜಕೀಯ: ಕಾಂಗ್ರೆಸ್ ಶಾಸಕರ ಜತೆ ದೆಹಲಿ ಹೋಟೆಲ್‌ನಲ್ಲಿ ಸಚಿನ್ ಪೈಲಟ್?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜುಲೈ 2020, 7:21 IST
Last Updated 12 ಜುಲೈ 2020, 7:21 IST
ಸಚಿನ್‌ ಪೈಲಟ್‌ ಮತ್ತು ಅಶೋಕ್‌ ಗೆಹ್ಲೋಟ್
ಸಚಿನ್‌ ಪೈಲಟ್‌ ಮತ್ತು ಅಶೋಕ್‌ ಗೆಹ್ಲೋಟ್   

ಜೈಪುರ: ರಾಜಸ್ಥಾನದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ಇದರ ಬೆನ್ನಲ್ಲೇ, ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಣ ಭಿನ್ನಮತ ಉಲ್ಬಣಿಸಿದೆ ಎಂದೂ ವರದಿಯಾಗಿದೆ. ಕಾಂಗ್ರೆಸ್‌ನ ಅನೇಕ ಶಾಸಕರ ಸಹಿತ ಸಚಿನ್‌ ಪೈಲಟ್‌ ದೆಹಲಿ ಹೋಟೆಲ್‌ನಲ್ಲಿದ್ದಾರೆ ಎಂದು ರಿಪಬ್ಲಿಕ್ ವರ್ಲ್ಡ್ ಜಾಲತಾಣ ಭಾನುವಾರ ಬೆಳಿಗ್ಗೆ ವರದಿ ಮಾಡಿದೆ. ಕಾಂಗ್ರೆಸ್‌ನ ಕೆಲವು ಶಾಸಕರ ಜತೆ ಸಚಿನ್ ಪೈಲಟ್ ದೆಹಲಿಯ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂದು ಎನ್‌ಡಿಟಿವಿ ಕೂಡ ವರದಿ ಮಾಡಿದೆ.

ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮತ್ತು ನಾಯಕ ರಾಹುಲ್ ಗಾಂಧಿ ಅವರಿಗೆ ಮಾಹಿತಿ ನೀಡಲಾಗಿದೆ. ಸೋನಿಯಾ ಅವರು ಈ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಭಿನ್ನಮತಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿರುವುದಾಗಿ ವರದಿ ಉಲ್ಲೇಖಸಿದೆ.

‘ಸರ್ಕಾರವನ್ನು ಪತನಗೊಳಿಸಲು ಸಂಚು ಹೂಡಲಾಗುತ್ತಿದೆ. ಕೇಂದ್ರ ಮತ್ತು ಬಿಜೆಪಿಯಿಂದ ಹಣ ನೀಡುವ ಮತ್ತು ಇತರ ಭರವಸೆಗಳನ್ನು ನೀಡಲಾಗಿದೆ. ನಾವು ಆತ್ಮವಿಶ್ವಾದಿಂದ ಇದ್ದೇವೆ. ಮಧ್ಯ ಪ್ರದೇಶದಂತಹ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಟಿಯಾಗಲು ಬಿಡುವುದಿಲ್ಲ’ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಸರ್ಕಾರ ಪತನಗೊಳಿಸುವ ಸಲುವಾಗಿ ನಮ್ಮ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ. ಕೆಲವು ಶಾಸಕರಿಗೆ ₹15 ಕೋಟಿ ಆಮಿಷವೊಡ್ಡಲಾಗಿದೆ ಎಂದು ಅಶೋಕ್ ಗೆಹ್ಲೋಟ್ ಶನಿವಾರ ಆರೋಪಿಸಿದ್ದರು.

ಶನಿವಾರ ಏನೇನು ನಡೆದಿತ್ತು?: ಗೆಹ್ಲೋಟ್‌ ಅವರ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್‌ ಶಾಸಕರ ಖರೀದಿಗೆ ಕುದುರೆ ವ್ಯಾಪಾರ ನಡೆಸಿದ್ದರೆಂಬ ಆರೋಪದ ಮೇರೆಗೆ ಇಬ್ಬರು ವ್ಯಕ್ತಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಪಡೆಯು (ಎಸ್‌ಒಜಿ) ಪ್ರಕರಣ ದಾಖಲಿಸಿ ಅವರನ್ನು ವಶಕ್ಕೆ ಪಡೆದಿತ್ತು. ಸರ್ಕಾರವನ್ನು ಉರುಳಿಸಲು ನಡೆದಿರುವ ಪ್ರಯತ್ನಗಳ ಕುರಿತು ಹೇಳಿಕೆಯನ್ನು ದಾಖಲಿಸುವಂತೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರಿಗೆ ರಾಜಸ್ಥಾನ ಪೊಲೀಸರು ನೋಟಿಸ್‌ ನೀಡಿದ್ದರು.

ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೆಲವು ಮಂತ್ರಿಗಳು ಮತ್ತು ಶಾಸಕರು ಶನಿವಾರ ಗೆಹ್ಲೊಟ್ ಅವರ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದ್ದರು. ಕಾಂಗ್ರೆಸ್‌ ಶಾಸಕರು ಮಾತ್ರವಲ್ಲದೆ ಪಕ್ಷೇತರ ಶಾಸಕರು ಸಹ ಈ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.