ಅತಿಶಿ
ನವದೆಹಲಿ: ಪಂಜಾಬ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರಿಗೆ ಪ್ರವಚನ ನೀಡುವ ಬದಲು ಅವರೊಂದಿಗೆ ಮಾತುಕತೆ ನಡೆಸುವಂತೆ ಪಕ್ಷವು (ಬಿಜೆಪಿ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಬೇಕು ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಸಲಹೆ ನೀಡಿದ್ದಾರೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಅತಿಶಿ, ಬಿಜೆಪಿ ಆಡಳಿತದಲ್ಲಿ ರೈತರ ಸ್ಥಿತಿ ಯಾವಾಗಲೂ ಕೆಟ್ಟದಾಗಿರುತ್ತದೆ. ರೈತರ ಬಗ್ಗೆ ಬಿಜೆಪಿ ಮಾತನಾಡುವುದು ಹೇಗಿದೆ ಎಂದರೆ ದಾವೂದ್ ಇಬ್ರಾಹಿಂ ಅಹಿಂಸೆಯ ಬಗ್ಗೆ ಉಪದೇಶ ಮಾಡಿದಂತೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದು ಪತ್ರದಲ್ಲಿ ಹೇಳಿದ್ದಾರೆ.
ದೆಹಲಿಯ ರೈತರ ಸಮಸ್ಯೆಗಳ ಬಗ್ಗೆ ಎಎಪಿ ಸರ್ಕಾರ ಗಮನಹರಿಸಿಲ್ಲ ಎಂದು ಚೌಹಾಣ್ ಅವರು ಬುಧವಾರ ಮುಖ್ಯಮಂತ್ರಿಗೆ (ಅತಿಶಿ) ಬರೆದ ಪತ್ರದಲ್ಲಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅತಿಶಿ, ಪಂಜಾಬ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಲು ಪ್ರಧಾನಿಗೆ ಹೇಳುವಂತೆ ಚೌಹಾಣ್ ಅವರಿಗೆ ಸಲಹೆ ನೀಡಿದ್ದಾರೆ.
ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ರೈತರು ಪಂಜಾಬ್ ಮತ್ತು ಹರಿಯಾಣ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.