ADVERTISEMENT

ಅಸ್ಸಾಂ: ಬ್ರಹ್ಮಪುತ್ರ ನದಿಯಲ್ಲಿ ನೀರಿನ ಮಟ್ಟ ಏರಿಕೆ, ಅಪಾರ ಪ್ರಮಾಣದ ಬೆಳೆ ಹಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಆಗಸ್ಟ್ 2023, 4:35 IST
Last Updated 31 ಆಗಸ್ಟ್ 2023, 4:35 IST
<div class="paragraphs"><p>ಬ್ರಹ್ಮಪುತ್ರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.</p></div>

ಬ್ರಹ್ಮಪುತ್ರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

   

–ಪಿಟಿಐ ಚಿತ್ರ

ಗುವಾಹಟಿ: ಅಸ್ಸಾಂನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಬ್ರಹ್ಮಪುತ್ರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ADVERTISEMENT

ಪ್ರವಾಹದಿಂದಾಗಿ ಮೋರಿಗಾಂವ್ ಜಿಲ್ಲೆಯ ಕನಿಷ್ಠ 105 ಗ್ರಾಮಗಳು ಹಾನಿಗೊಳಗಾಗಿದ್ದು, 3,059 ಹೆಕ್ಟೇರ್‌ಗಿಂತಲೂ ಹೆಚ್ಚು ಬೆಳೆ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ.

‘ಪ್ರವಾಹದಿಂದಾಗಿ ರಾಜ್ಯದಾದ್ಯಂತ ಸುಮಾರು 22,000 ಹೆಕ್ಟೇರ್ ಬೆಳೆ ಹಾನಿಯಾಗಿದೆ. ರೈತರಿಗೆ ಸಹಾಯ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಹಿಂದೆ ಸಂತ್ರಸ್ತ ರೈತರಿಗೆ ಸರ್ಕಾರದಿಂದ ಏನೂ ಸಿಗಲಿಲ್ಲ. ಆದರೆ, ನಮ್ಮ ಸರ್ಕಾರ ರೈತರಿಗೆ ಪರಿಹಾರ ನೀಡಲಿದೆ. ಬೆಳೆ ಹಾನಿ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ವಿತರಿಸಲಾಗುವುದು’ ಎಂದು ಅಸ್ಸಾಂನ ಕೃಷಿ ಸಚಿವ ಅತುಲ್ ಬೋರಾ ತಿಳಿಸಿದ್ದಾರೆ.

ಪ್ರವಾಹದಿಂದಾಗಿ ಸುಮಾರು 2 ಲಕ್ಷ ಜನರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಎಡೆಬಿಡದೆ ಮಳೆ ಸುರಿಯುತ್ತಿರುವ ಕಾರಣ ಹಲವು ನದಿಗಳ ನೀರಿನ ಮಟ್ಟ ಅಪಾಯಕಾರಿಯಾಗಿ ಏರಿಕೆಯಾಗಿದೆ. ಗುವಾಹಟಿಯಲ್ಲಿ ಹರಿಯುವ ಬ್ರಹ್ಮಪುತ್ರ ನದಿಯಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ.

ಶಿವಸಾಗರ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಈ ವರ್ಷ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ತಿಳಿಸಿದೆ.

ರಾಜ್ಯದ 18 ಜಿಲ್ಲೆಗಳು ಪ್ರವಾಹಪೀಡಿತವಾಗಿದ್ದು, ಸ್ಥಳೀಯ ಆಡಳಿತ ಮತ್ತು ರಾಜ್ಯ ವಿಪತ್ತು ನಿರ್ವಹಣೆ ಪಡೆಯು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.