ADVERTISEMENT

ಗಾಯಕ ಗರ್ಗ್‌ ಸಾವು: ಸಿಂಗಪುರದ ಜೊತೆ MLAT ಅನ್ವಯಿಸಲು ಅಸ್ಸಾಂ ಸರ್ಕಾರ ಮನವಿ

ಪಿಟಿಐ
Published 29 ಸೆಪ್ಟೆಂಬರ್ 2025, 15:44 IST
Last Updated 29 ಸೆಪ್ಟೆಂಬರ್ 2025, 15:44 IST
ಜುಬಿನ್‌ ಗರ್ಗ್–ಪಿಟಿಐ ಚಿತ್ರ
ಜುಬಿನ್‌ ಗರ್ಗ್–ಪಿಟಿಐ ಚಿತ್ರ   

ಗುವಾಹಟಿ: ‘ಗಾಯಕ ಜುಬಿನ್‌ ಗರ್ಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಸಿಂಗಪುರದೊಂದಿಗೆ ಪರಸ್ಪರ ಕಾನೂನು ನೆರವು ಒಪ್ಪಂದ (ಎಂಎಲ್‌ಎಟಿ) ಅನ್ವಯ ಮಾಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಅಸ್ಸಾಂ ಸರ್ಕಾರವು ಅಧಿಕೃತ ಮನವಿ ಸಲ್ಲಿಸಿದೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

‘ಎಂಎಲ್‌ಎಟಿ ಅನ್ವಯಿಸಿದರೆ, ಸಿಂಗಪುರದ ಅಧಿಕಾರಿಗಳು ಕೂಡ ತನಿಖೆಗೆ ಪೂರ್ಣ ಸಹಕಾರ ನೀಡಲಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿ ಹಾಗೂ ನೆರವು ನೀಡಲಿದ್ದು, ಆರೋಪಿಯನ್ನು ಸ್ವದೇಶಕ್ಕೆ ಕರೆತಂದು ನ್ಯಾಯ ಒದಗಿಸಲು ನೆರವಾಗಲಿದೆ’ ಎಂದು ಶರ್ಮಾ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಪ್ರಕರಣದ ತನಿಖೆ ನಡೆಸಲು ವಿಶೇಷ ಡಿಜಿಪಿ ಎಂ.ಪಿ. ಗುಪ್ತಾ ನೇತೃತ್ವದಲ್ಲಿ 10 ಮಂದಿ ಸದಸ್ಯರ ಎಸ್‌ಐಟಿಯನ್ನು ಅಸ್ಸಾಂ ಸರ್ಕಾರ ರಚಿಸಿತ್ತು. ಅಗತ್ಯ ಪ್ರಕ್ರಿಯೆಗಳನ್ನು ‍ಪೂರ್ಣಗೊಳಿಸಿದ ತಕ್ಷಣವೇ ಅಸ್ಸಾಂನ ಇಬ್ಬರು ಅಧಿಕಾರಿಗಳು ಸಿಂಗಪುರಕ್ಕೆ ಭೇಟಿ ನೀಡಲಿದ್ದಾರೆ. ಇಬ್ಬರು ಅಧಿಕಾರಿಗಳು ಈಗಾಗಲೇ ದೆಹಲಿಗೆ ತೆರಳಿದ್ದು, ನಂತರ ಸಿಂಗಪುರಕ್ಕೆ ತೆರಳಲಿದ್ದಾರೆ.

ADVERTISEMENT

‘ಸಿಂಗಪುರದೊಂದಿಗೆ ಭಾರತವು ಈಗಾಗಲೇ ಎಂಎಲ್‌ಎಟಿ ಹೊಂದಿದೆ. ಕೇಂದ್ರ ಗೃಹ ಸಚಿವಾಲಯವು ಈ ಸಂಬಂಧ ಸಿಂ‍ಗಪುರಕ್ಕೆ ಅಗತ್ಯ ದಾಖಲೆಗಳನ್ನು ಕಳುಹಿಸಬೇಕು. ಆಗ ಮಾತ್ರ ಅಲ್ಲಿನ ಸರ್ಕಾರದ ಅಧಿಕಾರಿಗಳಿಂದ ತನಿಖೆಗೆ ಅಗತ್ಯ ನೆರವು ಪಡೆಯಲು ಸಾಧ್ಯ. ಈ ಪ್ರಕ್ರಿಯೆಯೂ ಈಗಾಗಲೇ ಆರಂಭಗೊಂಡಿದೆ’ ಎಂದು ಅಸ್ಸಾಂ ಪೊಲೀಸ್‌ ಮಹಾ ನಿರ್ದೇಶಕ ಹರ್ಮೀತ್‌ ಸಿಂಗ್‌ ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ ಸಲ್ಲಿಕೆ: ‘ಜುಬಿನ್‌ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು, ವಿಸ್ತೃತವಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ಹರ್ಮೀತ್‌ ಸಿಂಗ್‌ ತಿಳಿಸಿದ್ದಾರೆ.

ಸಿಂಗಪುರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಮುಖ್ಯ ಆಯೋಜಕ ಶ್ಯಾಮ್‌ಕಾನು ಮಹಾಂತ, ಗರ್ಗ್‌ ಅವರ ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ ಸೇರಿದಂತೆ 10 ಮಂದಿಗೆ ಎಸ್‌ಐಟಿಯೂ ಈಗಾಗಲೇ ನೋಟಿಸ್‌ ನೀಡಿದೆ. 

ಮಹಾಂತ ಹಾಗೂ ಸಿದ್ಧಾರ್ಥ ಶರ್ಮಾ ವಿರುದ್ಧ ಇಂಟರ್‌ಪೋಲ್‌ ಮುಖಾಂತರ ಲುಕ್‌ಔಟ್‌ ನೋಟಿಸ್‌ ಜಾರಿಮಾಡಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ತಿಳಿಸಿದ್ದರು.

‘ಆ.6ರ ಒಳಗಾಗಿ ಪೊಲೀಸರ ಮುಂದೆ ಹಾಜರಾಗಬೇಕು. ಇಲ್ಲದಿದ್ದರೆ ಪೊಲೀಸರು ಶೋಧ ಕಾರ್ಯ ನಡೆಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದ್ದರು.

‘ನಾರ್ತ್‌ ಈಸ್ಟ್‌ ಇಂಡಿಯಾ ಫೆಸ್ಟಿವಲ್‌’ ಕಾರ್ಯಕ್ರಮದಲ್ಲಿ ಭಾಗವಹಿಸಲು ಜುಬಿನ್‌ ಶುಕ್ರವಾರ ಸಿಂಗಪುರಕ್ಕೆ ಬಂದಿದ್ದರು. ಅಲ್ಲಿ ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದರು.

ನಾರ್ತ್‌ ಈಸ್ಟ್‌ ಇಂಡಿಯಾ ಫೆಸ್ಟಿವಲ್‌ ಕಾರ್ಯಕ್ರಮದ ಆಯೋಜಕ ಶ್ಯಾಮ್‌ಕಾನು ಮಹಾಂತ, ಜುಬಿನ್‌ ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ ವಿರುದ್ಧ ಮೊರಿಗಾಂವ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

‘ಕೊನೆ ಕ್ಷಣದಲ್ಲಿ ಏನಾಯಿತು ಎಂದು ಗೊತ್ತಾಗಬೇಕು’‌

ಗುವಾಹಟಿ: ‘ಗಾಯಕ ಜುಬಿನ್‌ ಗರ್ಗ್ ಅವರ ಕೊನೆಯ ಕ್ಷಣಗಳಲ್ಲಿ ಏನಾಯಿತು ಎಂಬುದು ಇಡೀ ಕುಟುಂಬಕ್ಕೆ ತಿಳಿಯಬೇಕಿದೆ ಹೀಗಾಗಿ ಸರಿಯಾದ ರೀತಿಯಲ್ಲಿ ತನಿಖೆ ನಡೆಯಬೇಕು’ ಎಂದು  ಜುಬಿನ್‌ ಅವರ ಪತ್ನಿ ಗರಿಮಾ ಸೈಕಿಯಾ ಗರ್ಗ್‌ ಒತ್ತಾಯಿಸಿದ್ದಾರೆ.

ಗರ್ಗ್‌ ಅವರ 11ನೇ ದಿನದ ಆಚರಣೆ ಮುಗಿಸಿ ಮಾತನಾಡಿದ ಅವರು ‘ಅವರಿಗೆ ಏನಾಯಿತು? ಅಷ್ಟೊಂದು ನಿರ್ಲಕ್ಷ್ಯ ವಹಿಸಲು ಹೇಗೆ ತಾನೇ ಒಪ್ಪಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಅವರ ಜೊತೆಗೆ ಕೊನೆಯ ಕ್ಷಣದಲ್ಲಿ ಯಾರು ಇದ್ದರು? ಅವರಿಗೆ ಈಜಲು ಬರದಿದ್ದರೂ ಏಕೆ ಅವರನ್ನು ಮೇಲಕ್ಕೆ ಏಕೆ ಎತ್ತಲಿಲ್ಲ. ನೀರು ಹಾಗೂ ಬೆಂಕಿ ಹತ್ತಿರ ಹೋದರೆ ಜುಬಿನ್‌ ಅವರು ಮೂರ್ಛೆ ಹೋಗುತ್ತಾರೆ ಎಂದು ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ ಅವರಿಗೆ ಮುಂಚಿತವಾಗಿಯೇ ತಿಳಿದಿತ್ತು. ಅವರನ್ನು ಕರೆದುಕೊಂಡು ಹೋದವರು ಸರಿಯಾಗಿ ನೋಡಿಕೊಂಡಿದ್ದರೆ ಈ ರೀತಿ ನಡೆಯುತ್ತಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನನಗೆ ನ್ಯಾಯ ಬೇಕಿದೆ. ಸರಿಯಾದ ತನಿಖೆಯ ಮೂಲಕವೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ತನಿಖಾ ಪ್ರಕ್ರಿಯೆಯ ಕುರಿತಂತೆ ನನಗೆ ಸಂಪೂರ್ಣ ವಿಶ್ವಾಸವಿದೆ’ ಎಂದು ಗರಿಮಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.