ADVERTISEMENT

ಮೇಘಾಲಯಕ್ಕೆ ಪ್ರಯಾಣ: ನಿರ್ಬಂಧ ತೆರವುಗೊಳಿಸಿದ ಅಸ್ಸಾಂ

ಪಿಟಿಐ
Published 27 ನವೆಂಬರ್ 2022, 10:59 IST
Last Updated 27 ನವೆಂಬರ್ 2022, 10:59 IST
ಮೇಘಾಲಯ–ಅಸ್ಸಾಂ ಗಡಿಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿರುವ ಅಸ್ಸಾಂ ಭದ್ರತಾ ಸಿಬ್ಬಂದಿ (ಪಿಟಿಐ ಚಿತ್ರ)
ಮೇಘಾಲಯ–ಅಸ್ಸಾಂ ಗಡಿಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿರುವ ಅಸ್ಸಾಂ ಭದ್ರತಾ ಸಿಬ್ಬಂದಿ (ಪಿಟಿಐ ಚಿತ್ರ)   

ಗುವಾಹಟಿ: ಅಸ್ಸಾಂ– ಮೇಘಾಲಯ ಗಡಿಯಲ್ಲಿ ನಡೆದ ಗಲಭೆ ಕಾರಣದಿಂದಾಗಿ ಸಾರ್ವಜನಿಕರಿಗೆ ಮೇಘಾಲಯ ಪ್ರಯಾಣವನ್ನು ನಿರ್ಬಂಧಿಸಲಾಗಿತ್ತು. ಘಟನೆ ನಡೆದ ಆರು ದಿನಗಳ ಬಳಿಕ ಈ ನಿರ್ಬಂಧವನ್ನುಭಾನುವಾರ ತೆರವು ಮಾಡಲಾಗಿದೆ.

‘ಮೇಘಾಲಯವನ್ನು ಪ್ರವೇಶಿಸಲು ಅಸ್ಸಾಂನ ವಾಹನಗಳಿಗೆ ಅನುಮತಿ ನೀಡಲಾಗಿದೆ. ಅಗತ್ಯ ಇದ್ದಲ್ಲಿ, ರಾಜ್ಯದ ವಾಹನಗಳ ಜೊತೆ ಬೆಂಗಾವಲು ವಾಹನಗಳನ್ನು ಕಳುಹಿಸಲಾಗುತ್ತದೆ. ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಗುವಾಹಟಿಯ ಜೊರಹಾಟ್‌ ಮತ್ತು ಕಚಾರ್‌ ಗಡಿ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್‌ ಮುಂದುವರೆದಿದೆ. ವ್ಯಾಪಾರ ಸಂಬಂಧಿ ವಾಹನಗಳಿಗೆ, ಟ್ರಕ್‌ಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿಲ್ಲ.

ADVERTISEMENT

ಪೊಲೀಸರ ಸಲಹೆ: ಮೇಘಾಲಯ ಪ್ರಯಾಣಕ್ಕೆ ಅನುವು ನೀಡಿದ ಬಳಿಕ ಅಸ್ಸಾಂ ಪೊಲೀಸರು ಸಾರ್ವಜನಿಕರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

‘ಅಸ್ಸಾಂ ಮತ್ತು ಮೇಘಾಲಯದ ನಡುವೆ ಎಲ್ಲವೂ ಸಹಜಸ್ಥಿತಿಗೆ ಮರಳಿಲ್ಲ. ಅಸ್ಸಾಂ ಜನರ ಅಥವಾ ವಾಹನಗಳ ಮೇಲೆ ಮೇಘಾಲಯದಲ್ಲಿ ದಾಳಿ ನಡೆಯಬಹುದು. ಆದ್ದರಿಂದ ಮೇಘಾಲಯಕ್ಕೆ ಹೋಗದಿರುವುದೇ ಒಳಿತು’ ಎಂದು ಪೊಲೀಸರು ಹೇಳಿದ್ದಾರೆ.

‘ಒಂದುವೇಳೆ ಮೇಘಾಲಯಕ್ಕೆ ಹೋಗಲೇಬೇಕಾದ ಜರೂರು ಇದ್ದರೆ, ಮೇಘಾಲಯದ ನೋಂದಣಿ ಇರುವ ವಾಹನಗಳಲ್ಲೇ ಪ್ರಯಾಣ ಬೆಳೆಸಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.