ADVERTISEMENT

ಅಸ್ಸಾಂ–ಮೇಘಾಲಯ ಗಡಿ ವಿವಾದ: ಸಚಿವರುಗಳಿಂದ ಜಂಟಿ ಪರಿಶೀಲನೆ

ಪಿಟಿಐ
Published 10 ಅಕ್ಟೋಬರ್ 2021, 14:37 IST
Last Updated 10 ಅಕ್ಟೋಬರ್ 2021, 14:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಿಲಿಂಗ್‌ಕಟ, ಅಸ್ಸಾಂ: ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಸಚಿವರು ಶನಿವಾರ ಉಭಯ ರಾಜ್ಯಗಳ ನಡುವಣ ಗಡಿ ವಿವಾದ ಇತ್ಯರ್ಥಪಡಿಸಿಕೊಳ್ಳುವ ಕ್ರಮವಾಗಿ ಅಂತರರಾಜ್ಯದ ಗಡಿ ಭಾಗದಲ್ಲಿ ಜಂಟಿ ಪರಿಶೀಲನೆ ನಡೆಸಿದರು.

ಸುದೀರ್ಘ ಕಾಲದಿಂದ ಇರುವ ಗಡಿ ವಿವಾದ ಬಗೆಹರಿಸಿಕೊಳ್ಳುವ ಉದ್ದೇಶದಿಂದ ಗಡಿ ಭಾಗದ ಪಿಲಿಂಗ್‌ಕಟ, ಗಣೇಶ್‌ ನಗರ್, ಮೈಖುಲಿ, ಪಟರ್‌ಕುಚಿ ಮತ್ತು ಖಾನಾಪರ ಪ್ರದೇಶದಲ್ಲಿ ಈ ಜಂಟಿ ಪರಿಶೀಲನೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ಸಾಂನ ಜಲಸಂಪನ್ಮೂಲ ಸಚಿವ ಪಿಜುಶ್‌ ಹಜಾರಿಕಾ, ಶಾಸಕ ಅತುಲ್‌ ಬೊರಾ, ಮೇಘಾಲಯದ ಉಪ ಮುಖ್ಯಮಂತ್ರಿ ಪ್ರೆಸ್ಟೊನ್‌ ಟಿನ್‌ಸೊಂಗ್ ಹಾಗೂ ಉಭಯ ರಾಜ್ಯಗಳ ಅಧಿಕಾರಿಗಳು ಹಾಜರಿದ್ದು, ಸ್ಥಳೀಯರ ಜೊತೆಗೂ ಚರ್ಚಿಸಿದರು.

ADVERTISEMENT

ಗಡಿ ವಿವಾದ ಮತ್ತು ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಕುರಿತು ಸ್ಥಳೀಯ ನಿವಾಸಿಗಳ ಅಭಿಪ್ರಾಯಗಳನ್ನು ತಿಳಿಯಲು ಜಂಟಿ ಸಮೀಕ್ಷೆ ಕೈಗೊಳ್ಳಲಾಯಿತು ಎಂದು ಹಜಾರಿಕ ತಿಳಿಸಿದರು. ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಿದ್ದು, ಈ ಸಂಬಂಧ ಅವರು ಅಂತಿಮ ತೀರ್ಮಾನವನ್ನು ಕೈಗೊಳ್ಳುವರು ಎಂದು ತಿಳಿಸಿದರು.

ಜಂಟಿ ತಂಡ ಭೇಟಿ ನೀಡಿದ್ದ ಕಡೆಗಳಲ್ಲಿ ಗಡಿ ವಿವಾದ, ಭಿನ್ನಾಭಿಪ್ರಾಯಗಳು ಹೆಚ್ಚು ಕಂಡುಬರಲಿಲ್ಲ. ಉಭಯ ಸರ್ಕಾರಗಳ ಚರ್ಚೆಯಿಂದ ಪರಿಹಾರ ದೊರಕಬಹುದು ಎಂದು ಹೇಳಿದರು.

ಗಡಿ ವಿವಾದ ಬಗೆಹರಿಸಲು ಅಸ್ಸಾಂ ಮುಖ್ಯಮಂತ್ರಿ ಹಿ‌ಮಂತ್ ಬಿಸ್ವ ಶರ್ಮಾ ಆದ್ಯತೆ ನೀಡಿದ್ದಾರೆ. ಈಗಿನ ಜಂಟಿ ಪರಿಶೀಲನೆಯು ಪರಿಹಾರ ಕಂಡುಕೊಳ್ಳುವಲ್ಲಿ ಉತ್ತಮ ಹೆಜ್ಜೆಯಾಗಿದೆ ಎಂದು ಹಜಾರಿಕ ಹೇಳಿದರು.

ಮೇಘಾಲಯದ ಉಪ ಮುಖ್ಯಮಂತ್ರಿ ಪ್ರೆಸ್ಟೊನ್‌ ಟಿನ್‌ಸೊಂಗ್ ಅವರು ಯಾವುದೇ ಗಡಿವಿವಾದ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ಥಳಕ್ಕೆ ಭೇಟಿ ನೀಡುವುದು ಅಗತ್ಯ. ಅದೇ ಕಾರಣದಿಂದ ಭೇಟಿ ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.