ಗುವಾಹಟಿ: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಶಿವಸೇನಾದ 34 ಶಾಸಕರು ಹಾಗೂ 8 ಪಕ್ಷೇತರ ಶಾಸಕರು ಮಹಾ ವಿಕಾಸ್ ಅಗಾಡಿ (ಎಂವಿಎ) ಸರ್ಕಾರದ ವಿರುದ್ಧ ಬಂಡಾಯ ಎದ್ದು, ದೂರದ ಅಸ್ಸಾಂನಲ್ಲಿ ಹೋಗಿ ಕುಳಿತಿದ್ದಾರೆ.
ಗುವಾಹಟಿಯ ಪಂಚತಾರಾ ಹೋಟೆಲ್ ಹಾಗೂ ರೆಸಾರ್ಟ್ ‘ರಾಡಿಸನ್ ಬ್ಲೂ ಹೋಟೆಲ್’ನಲ್ಲಿ ಶಾಸಕರು ತಂಗಿದ್ದಾರೆ. ಇವರಿಗೆ ಅಸ್ಸಾಂ ಸರ್ಕಾರ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಿದೆ.
ಇನ್ನೊಂದೆಡೆ ಅಸ್ಸಾಂನಲ್ಲಿ ಕಳೆದ ಮೂರು ದಿನಗಳಿಂದ ಸುರಿದ ವ್ಯಾಪಕ ಮಳೆಗೆ ಪ್ರವಾಹ ಉಂಟಾಗಿ 89ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 50 ಲಕ್ಷ ಜನ ನಿರಾಶ್ರಿತರಾಗಿದ್ದಾರೆ. ಎನ್‌ಡಿಆರ್‌ಎಫ್ ಸೇರಿದಂತೆ ಅನೇಕ ಪರಿಹಾರ ಕಾರ್ಯಾಚರಣೆ ತಂಡಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ.
ಆದರೆ, ಮಹಾರಾಷ್ಟ್ರ ಶಾಸಕರ ಜೊತೆ ಹೋಟೆಲ್‌ನಲ್ಲಿ ತಂಗಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವಿರುದ್ಧ ಅಸ್ಸಾಂ ಜನರೂ ಸೇರಿದಂತೆ ವಿರೋಧ ಪಕ್ಷಗಳಿಂದ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
‘ಅಸ್ಸಾಂನಲ್ಲಿ ಪ್ರವಾಹ ಬಂದು ಜನ ಸಾಯುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರದ ಸಿಎಂ ಶರ್ಮಾ ಮಹಾರಾಷ್ಟ್ರ ಶಾಸಕರ ಜೊತೆ ಸೇರಿಕೊಂಡು ಹೋಟೆಲ್‌ನಲ್ಲಿ ಮಜಾ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ರಾಡಿಸನ್ ಹೋಟೆಲ್ ಮುಂದೆ ಅಸ್ಸಾಂ ಟಿಎಂಸಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಮಾಡಿದ್ದಾರೆ.
ಅಸ್ಸಾಂ ರಾಜ್ಯ ಟಿಎಂಸಿ ಅಧ್ಯಕ್ಷ ರಿಪುರ್ ಬೋರಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಸಿಎಂ ಶರ್ಮಾ ಅವರು ಶಿವಸೇನೆ ಶಾಸಕರಿಗೆ ರಾಜಾತಿಥ್ಯವನ್ನು ಸಾರ್ವಜನಿಕ ತೆರಿಗೆ ಹಣದಲ್ಲಿ ನೀಡುತ್ತಿದ್ದಾರೆ ಎಂದು ಅಸ್ಸಾಂ ಕಾಂಗ್ರೆಸ್ ಆರೋಪಿಸಿದೆ.
ಇನ್ನು ಶಿವಸೇನೆ ಶಾಸಕ ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿ ಹೋಟೆಲ್‌ನಲ್ಲಿ ತಂಗಿರುವ ಶಾಸಕರನ್ನು ಅಸ್ಸಾಂ ಸಚಿವರು, ಬಿಜೆಪಿ ನಾಯಕರು ಭೇಟಿಯಾಗುತ್ತಿದ್ದಾರೆ. ಇತ್ತ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ದಾವಂತರದಲ್ಲಿರುವ ಬಿಜೆಪಿ, ಶಿಂಧೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.