
ಪ್ರಾತಿನಿಧಿಕ ಚಿತ್ರ
ಲಖನೌ: ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ನಾಯಕ ಮದನ್ ಚೌಹಾಣ್ ಅವರ ಹತ್ಯೆಗೆ ಯತ್ನ ನಡೆದಿದ್ದು, ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಕಾರಿನಲ್ಲಿ ಬಂದ ಯುವಕರ ಗುಂಪು ಗುಂಡು ಹಾರಿಸಲು ಪ್ರಯತ್ನಿಸಿದೆ. ಆದರೆ ಅವರ ಬಂದೂಕಿನಿಂದ ಗುಂಡು ಹಾರದಿರುವುದರಿಂದ ಯತ್ನ ವಿಫಲವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಚೌಹಾಣ್ ಅವರು ಸಂಬಂಧಿಕರ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ತೆರಳುತ್ತಿದ್ದಾಗ, ಸೋಮವಾರ ರಾತ್ರಿ ಗರ್ಮುಕ್ತೇಶ್ವರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಚೌಹಾಣ್, ಮುಖ್ಯ ರಸ್ತೆಯಿಂದ ಗ್ರಾಮದ ರಸ್ತೆಗೆ ಪ್ರವೇಶಿಸುತ್ತಿದ್ದಂತೆ, ಕಾರಿನಲ್ಲಿ ಬಂದ ಕೆಲವು ಯುವಕರು ತಮ್ಮ ವಾಹನವನ್ನು ಅಡ್ಡಹಾಕಿದರು. ಅದರಲ್ಲಿ ಓರ್ವ ಪಿಸ್ತೂಲ್ ತೆಗೆದು ಗುಂಡು ಹಾರಿಸಲು ಯತ್ನಿಸಿದನು. ಆದರೆ, ಗುಂಡು ಹಾರಲಿಲ್ಲ ಎಂದು ತಿಳಿಸಿದ್ದಾರೆ.
ಕೂಡಲೇ ಅವರ ಭದ್ರತಾ ಸಿಬ್ಬಂದಿ ದಾಳಿಕೋರರನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ, ಹಂತಕರ ಗುಂಪು ಸ್ಥಳದಿಂದ ಪರಾರಿಯಾಯಿತು ಎಂದು ತಿಳಿಸಿದ್ದಾರೆ.
ಚೌಹಾಣ್ ನೀಡಿದ ದೂರಿನ ಆಧಾರದ ಮೇಲೆ, ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಭಟ್ನಾಗರ್ ಹೇಳಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.