ನವದೆಹಲಿ: ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಮಹಾವಿಕಾಸ ಅಘಾಡಿ (ಎಂವಿಎ) ಮೈತ್ರಿಕೂಟವು ಗದ್ದುಗೆ ಏರಲಿದೆ ಎಂದು ಎರಡು ಸಮೀಕ್ಷೆಗಳು ತಿಳಿಸಿವೆ. ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ.
ಮಹಾರಾಷ್ಟ್ರ ವಿಧಾನಸಭೆಯ ಎಲ್ಲ 288 ಸ್ಥಾನಗಳಿಗೆ ಹಾಗೂ ಜಾರ್ಖಂಡ್‌ನ ಎರಡನೇ ಹಂತದ 38 ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯಿತು. ಜಾರ್ಖಂಡ್‌ನ ಮೊದಲ ಹಂತದ ಮತದಾನ ನವೆಂಬರ್ 13ರಂದು ನಡೆದಿತ್ತು. ಮತದಾನ ಮುಗಿದ ಬೆನ್ನಲ್ಲೇ, ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದವು. ಮತ ಎಣಿಕೆ ನವೆಂಬರ್ 23ರಂದು ನಡೆಯಲಿದೆ.
ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 5-7 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕೆಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆಗಳ ಚುನಾವಣೆಯಲ್ಲಿ ಬಹುತೇಕ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ಸುಳ್ಳಾಗಿತ್ತು. ಈ ಸಮೀಕ್ಷೆಗಳನ್ನು ಭಾರತೀಯ ಚುನಾವಣಾ ಆಯೋಗ ಕಟುವಾಗಿ ಟೀಕಿಸಿತ್ತು.
‘81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಕಾಂಗ್ರೆಸ್–ಜೆಎಂಎಂ ಮೈತ್ರಿಕೂಟಕ್ಕೆ ಅಂದಾಜು 53 ಸ್ಥಾನಗಳು ಸಿಗಲಿವೆ. ಎನ್‌ಡಿಎ ಮೈತ್ರಿಕೂಟ ಕೇವಲ 25 ಸ್ಥಾನಗಳನ್ನು ಗಳಿಸಲಿದೆ. ಉಳಿದ ಪಕ್ಷಗಳು 3 ಕ್ಷೇತ್ರಗಳಲ್ಲಿ ಜಯ ಗಳಿಸಲಿವೆ’ ಎಂದು ‘ಆ್ಯಕ್ಸಿಸ್ ಮೈ ಇಂಡಿಯಾ’ ಭವಿಷ್ಯ ನುಡಿದಿದೆ. ಆದರೆ, ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಎನ್‌ಡಿಎ ಜಯ ಗಳಿಸಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ.
ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ (ಶಿಂದೆ ಬಣ)-ಎನ್‌ಸಿಪಿ (ಅಜಿತ್ ಪವಾರ್ ಬಣ) ಮೈತ್ರಿಕೂಟ (ಮಹಾಯುತಿ) ಅಧಿಕಾರದಲ್ಲಿದ್ದರೆ, ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟ ಆಡಳಿತ ನಡೆಸುತ್ತಿದೆ.
ಹಲವಾರು ಸುದ್ದಿ ಸಂಸ್ಥೆಗಳೊಂದಿಗೆ ನಡೆಸಲಾದ ಮ್ಯಾಟ್ರಿಜ್ ಸಮೀಕ್ಷೆಯು ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಶೇ 48 ಮತಗಳೊಂದಿಗೆ 150–170 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿವೆ ಎಂದು ಅಂದಾಜು ಮಾಡಿದೆ. ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಶೇ 42 ಮತಗಳೊಂದಿಗೆ 110–130 ಸ್ಥಾನಗಳನ್ನಷ್ಟೇ ಗಳಿಸಲಿವೆ ಎಂದು ತಿಳಿಸಿದೆ. ಜಾರ್ಖಂಡ್‌ನಲ್ಲಿ ಎನ್‌ಡಿಎ 42–47 ಕ್ಷೇತ್ರಗಳಲ್ಲಿ ಹಾಗೂ ಇಂಡಿಯಾ ಮೈತ್ರಿಕೂಟವು 25–30 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದೂ ಅಂದಾಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.