ADVERTISEMENT

ಕಾಂಗ್ರೆಸ್‌ಗೆ ಸೋನಿಯಾ ಸಾರಥ್ಯ ಮುಂದುವರಿಕೆ; ನಾಯಕತ್ವದಲ್ಲಿ ನಂಬಿಕೆಯಿದೆ –ಖರ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2022, 16:12 IST
Last Updated 13 ಮಾರ್ಚ್ 2022, 16:12 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ    

ನವದೆಹಲಿ: ‘ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಾಯಕತ್ವದ ಮೇಲೆ ನಮಗೆ ನಂಬಿಕೆ ಇದೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೋನಿಯಾ ಗಾಂಧಿ ಅವರು ಪಕ್ಷವನ್ನು ಮುನ್ನಡೆಸಲಿದ್ದು, ಮುಂದಿನ ಕ್ರಮಗಳನ್ನು ಅವರೇ ತೆಗೆದುಕೊಳ್ಳಲಿದ್ದಾರೆ. ಅವರ ನಾಯಕತ್ವದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ’ ಎಂದು ತಿಳಿಸಿದರು.

ಎಐಸಿಸಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರು ಮುಂದುವರಿಯಲಿದ್ದಾರೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಕುರಿತು ಚರ್ಚೆ ನಡೆಸಲಾಯಿತು. ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲು ತೀರ್ಮಾನಿಸಲಾಯಿತು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ADVERTISEMENT

ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಕುರಿತು ಆತ್ಮಾವಲೋಕನ ನಡೆಸುವ ನಿಟ್ಟಿನಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಇತರೆ ಪ್ರಮುಖ ನಾಯಕರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ಭಾನುವಾರ ಎಐಸಿಸಿ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಅಂಬಿಕಾ ಸೋನಿ, ಸಲ್ಮಾನ್‌ ಖುರ್ಷಿದ್‌, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಹರೀಶ್ ರಾವತ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಕಾಂಗ್ರೆಸ್‌ ಪಂಜಾಬ್‌ನಲ್ಲಿ 117 ಸ್ಥಾನಗಳ ಪೈಕಿ 18 ಸ್ಥಾನಗಳಲ್ಲಿ ಮಾತ್ರ ಜಯಿಸುವ ಮೂಲಕ ಅಧಿಕಾರ ಕಳೆದುಕೊಂಡಿದ್ದು, ಉತ್ತರ ಪ್ರದೇಶದ 403 ಸ್ಥಾನಗಳಲ್ಲಿ ಕೇವಲ 2, ಉತ್ತರಾಖಂಡದ 70ರಲ್ಲಿ 18, ಗೋವಾದ 40ರಲ್ಲಿ 12 ಮತ್ತು ಮಣಿಪುರದಲ್ಲಿ 60 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಮಾತ್ರ ಗಳಿಸಿದೆ.

ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ ತೀವ್ರ ಹಿನ್ನಡೆ ಅನುಭವಿಸಿದೆ. ಇದರ ಬೆನ್ನಲ್ಲೇ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.