
ಅಟಲ್ ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸಿದ ಮಹಿಳೆಯರು
ನವದೆಹಲಿ: ನಗರ ಪ್ರದೇಶದ ಬಡವರು, ಕಾರ್ಮಿಕರು ಸೇರಿದಂತೆ ಸೌಲಭ್ಯವಂಚಿತ ನಿವಾಸಿಗಳಿಗೆ ಕೈಗೆಟುಕುವ ದರದಲ್ಲಿ ಪೌಷ್ಟಿಕ ಆಹಾರ ಪೂರೈಸುವ ಯೋಜನೆಯ ಭಾಗವಾಗಿ ದೆಹಲಿ ಸರ್ಕಾರವು ಗುರುವಾರ ರಾಷ್ಟ್ರ ರಾಜಧಾನಿಯಾದ್ಯಂತ 25 ಅಟಲ್ ಕ್ಯಾಂಟೀನ್‌ಗಳನ್ನು ಆರಂಭಿಸಿದೆ.
ಕೃಷ್ಣ ನಗರದಲ್ಲಿ ‘ಅಟಲ್ ಕ್ಯಾಂಟೀನ್’ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ರೇಖಾ ಗುಪ್ತಾ, ‘ದೆಹಲಿಯ ಯಾವುದೇ ವ್ಯಕ್ತಿ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ‘ಅಟಲ್ ಕ್ಯಾಂಟೀನ್’ ಯೋಜನೆ ಜಾರಿಗೆ ತರಲಾಗಿದೆ. ಈ ಕ್ಯಾಂಟೀನ್‌ಗಳಲ್ಲಿ ನಿತ್ಯ ₹5ಕ್ಕೆ ಪೌಷ್ಟಿಕ ಆಹಾರ ದೊರೆಯಲಿದೆ’ ಎಂದು ಹೇಳಿದ್ದಾರೆ.
ಈ ಯೋಜನೆಯನ್ನು ಕಡಿಮೆ ಅವಧಿಯಲ್ಲಿ ಅನುಷ್ಠಾನಗೊಳಿಸಿದ್ದಕ್ಕಾಗಿ ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ (ಡಿಯುಎಸ್‌ಐಬಿ) ಅಧಿಕಾರಿಗಳನ್ನು ರೇಖಾ ಗುಪ್ತಾ ಅವರು ಶ್ಲಾಘಿಸಿದರು. ಈ ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆದರ್ಶಗಳಿಗೆ ಅನುಗುಣವಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟು 100 ಅಟಲ್ ಕ್ಯಾಂಟೀನ್‌ಗಳನ್ನು ಆರಂಭಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ. ಪ್ರತಿ ಕ್ಯಾಂಟೀನ್‌ನಲ್ಲಿ ದಿನಕ್ಕೆ 1,000 ಊಟ ಸಿಗಲಿದ್ದು, ನಗರದಾದ್ಯಂತ ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜನವಾಗಲಿದೆ ಎಂದೂ ಅವರು ವಿವರಿಸಿದ್ದಾರೆ.
2025ರ ಡಿಸೆಂಬರ್ 25ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ಯೋಜನೆಯ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಸರ್ಕಾರ ₹104 ಕೋಟಿ ನಿಗದಿಪಡಿಸಿದೆ.
ಕೇಂದ್ರ ಸಚಿವ ಹರ್ಷ ಮಲ್ಹೋತ್ರಾ, ದೆಹಲಿ ನಗರಾಭಿವೃದ್ಧಿ ಸಚಿವ ಆಶಿಶ್ ಸೂದ್, ಬಿಜೆಪಿ ಶಾಸಕ ಅನಿಲ್ ಗೋಯಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.