
ನವದೆಹಲಿಯಲ್ಲಿ ‘ಅಟಲ್ ಕ್ಯಾಂಟೀನ್’ ಅನ್ನು ಗುರುವಾರ ಉದ್ಘಾಟಿಸಿದ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಆಹಾರದ ಗುಣಮಟ್ಟ ಪರೀಕ್ಷಿಸಿದರು
– ಪಿಟಿಐ ಚಿತ್ರ
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 101ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ದೆಹಲಿ ಸರ್ಕಾರ ಗುರುವಾರ 45 ‘ಅಟಲ್ ಕ್ಯಾಂಟೀನ್’ಗಳಿಗೆ ಚಾಲನೆ ನೀಡಿದೆ. ಈ ಕ್ಯಾಂಟೀನ್‌ಗಳಲ್ಲಿ ನಿತ್ಯ ₹5ಕ್ಕೆ ಪೌಷ್ಟಿಕ ಆಹಾರ ದೊರೆಯಲಿದೆ ಎಂದು ಸರ್ಕಾರ ಹೇಳಿದೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಕೇಂದ್ರ ಇಂಧನ ಮತ್ತು ವಸತಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ನೆಹರೂ ನಗರದ ‘ಅಪ್ನಾ ಬಜಾರ್’ ಬಳಿ ‘ಅಟಲ್ ಕ್ಯಾಂಟೀನ್’ಗೆ ಚಾಲನೆ ನೀಡಿದರು. ಇದೇ ವೇಳೆ ವರ್ಚುವಲ್ ಆಗಿ 44 ಕ್ಯಾಂಟೀನ್‌ಗಳನ್ನು ಉದ್ಘಾಟಿಸಲಾಯಿತು.
‘ಒಟ್ಟು 100 ಅಟಲ್ ಕ್ಯಾಂಟೀನ್‌ಗಳನ್ನು ಆರಂಭಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ. ಅದರ ಭಾಗವಾಗಿ ಇಂದು 45 ಕ್ಯಾಂಟೀನ್‌ಗಳಿಗೆ ಗುರುವಾರ ಚಾಲನೆ ನೀಡಲಾಗಿದೆ. ಉಳಿದ 55 ಕ್ಯಾಂಟೀನ್‌ಗಳು ಮುಂದಿನ 15ರಿಂದ 20 ದಿನಗಳಲ್ಲಿ ಆರಂಭವಾಗಲಿವೆ’ ಎಂದು ರೇಖಾ ಗುಪ್ತಾ ಅವರು ಮಾಹಿತಿ ನೀಡಿದರು.
‘ಪ್ರತಿ ಕ್ಯಾಂಟೀನ್‌ಗೆ ನಿತ್ಯ ಸುಮಾರು 1,000 ಊಟಗಳನ್ನು ವಿತರಿಸಲಾಗುವುದು. ಈ ಯೋಜನೆಯಿಂದ ನಿತ್ಯ 1 ಲಕ್ಷ ಜನರಿಗೆ ಅನುಕೂಲವಾಗಲಿದೆ. ರಾಜಧಾನಿಯಲ್ಲಿ ಕೂಲಿ ಕೆಲಸಗಾರರು, ಕಾರ್ಮಿಕರು, ಬಡವರಿಗೆ ಪೌಷ್ಟಿಕ ಆಹಾರ ದೊರೆಯಲಿ ಎಂಬುದು ಯೋಜನೆಯ ಉದ್ದೇಶ. ಈ ಯೋಜನೆಗಾಗಿ ಸರ್ಕಾರ ₹104.24 ಕೋಟಿ ಮಂಜೂರು ಮಾಡಿದೆ’ ಎಂದು ಅವರು ವಿವರಿಸಿದರು.
‘ನಿತ್ಯ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ರಾತ್ರಿ 6.30ರಿಂದ 9 ಗಂಟೆಯವರೆಗೆ ಊಟ ವಿತರಿಸಲಾಗುವುದು. ಒಂದು ಊಟಕ್ಕೆ ₹5 ನಿಗದಿಪಡಿಸಲಾಗಿದೆ. ಸರ್ಕಾರ ಪ್ರತಿ ಊಟಕ್ಕೆ ತಲಾ ₹25 ವ್ಯಯಿಸಲಿದೆ’ ಎಂದು ಅವರು ತಿಳಿಸಿದರು.
ಊಟವು ರೋಟಿ, ಅನ್ನ, ದಾಲ್ ಮತ್ತು ತರಕಾರಿ ಪಲ್ಯವನ್ನು ಒಳಗೊಂಡಿರುತ್ತದೆ. ಪ್ರತಿ ಕ್ಯಾಂಟೀನ್‌ಗಳು ಆಧುನಿಕ ಶೈಲಿಯ ಅಡುಗೆ ಮನೆ ಹೊಂದಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.