ನವದೆಹಲಿ: ಸೈಕಲ್‌ಗೆ ಭಾರತದಲ್ಲಿ ಅನ್ವರ್ಥವಾಗಿರುವ ‘ಅಟ್ಲಾಸ್’ ಕಂಪನಿಯು ದೆಹಲಿ ಹೊರವಲಯದ ತನ್ನ ಕೊನೇ ಉತ್ಪಾದನಾ ಘಟಕವನ್ನು ಮುಚ್ಚಿದೆ. ಹಣದ ಕೊರತೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಕಂಪನಿ ಹೇಳಿದೆ.
ವಿಚಿತ್ರವೆಂದರೆ ಜೂನ್ 3ರ ವಿಶ್ವ ಬೈಸಿಕಲ್ ದಿನದಂದೇ ಅಟ್ಲಾಸ್ ಸೈಕಲ್ ಕಂಪನಿಯೂ ಬಾಗಿಲು ಹಾಕಿದೆ. ಅಲ್ಲದೆ, ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 431 ಉದ್ಯೋಗಿಗಳನ್ನು ಅದು ವಜಾಗೊಳಿಸಿದೆ. ಕಂಪನಿಯಲ್ಲಿ ಒಟ್ಟಾರೆ ಸಾವಿರಕ್ಕೂ ಅಧಿಕ ನೌಕರರಿದ್ದಾರೆ ಎಂದು ಕಾರ್ಮಿಕ ಸಂಘಟನೆ ಮುಖ್ಯಸ್ಥರು ಹೇಳಿದ್ದಾರೆ.
‘ಆರ್ಥಿಕ ಮುಗ್ಗಟ್ಟಿನಿಂದಾಗಿ ಕಂಪನಿಯ ಉತ್ಪಾದನಾ ಘಟಕ ಮುಚ್ಚುತ್ತಿದ್ದೇವೆ. ಆದರೆ, ಇದು ತಾತ್ಕಾಲಿಕ. ಕಂಪನಿ ನಡೆಸಲು ಅಗತ್ಯವಿರುವ ₹50 ಕೋಟಿಗಳನ್ನು ನಾವು ಜಮೀನು ಮಾರಾಟ ಮಾಡಿ ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅದು ಹೊಂದಿಕೆಯಾದ ಕೂಡಲೆ ಕಂಪನಿಯೂ ತೆರೆಯಬಹುದು. ವಜಾಗೊಂಡಿರುವ ನೌಕರರಿಗೆ ನಿಯಮಗಳಿಗೆ ಅನುಸಾರವಾಗಿ ವೇತನ ನೀಡಲಾಗುವುದು,’ ಎಂದು ಸಂಸ್ಥೆಯ ಸಿಇಒ ಎನ್‌ಪಿ ಸಿಂಗ್ ರಾಣ ಹೇಳಿದ್ದಾರೆ.
1951ರಲ್ಲಿ ಸ್ಥಾಪನೆಯಾದ ಅಟ್ಲಾಸ್ ಸೈಕಲ್ ಮೊದಲಿಗೆ ಹರಿಯಾಣದ ಸೋನಿಪತ್‌ನಿಂದ ಉತ್ಪಾದನೆ ಆರಂಭಸಿತ್ತು. 1965ರ ಹೊತ್ತಿಗೆ ಬಾರತದಲ್ಲಿ ಅದು ಅತಿದೊಡ್ಡ ಸೈಕಲ್ ತಯಾರಕ ಕಂಪನಿಯಾಗಿ ಹೊರಹೊಮ್ಮಿತು. ಇದು ವಿದೇಶಗಳಲ್ಲಿಯೂ ಜನಪ್ರಿಯತೆ ಗಳಿಸಿದೆ. ವರ್ಷಕ್ಕೆ 40 ಲಕ್ಷ ಬೈಸಿಕಲ್‌ಗಳನ್ನು ಉತ್ಪಾದಿಸುವ ಮೂಲಕ ಅಟ್ಲಾಸ್ ವಿಶ್ವದ ಅತಿದೊಡ್ಡ ಸೈಕಲ್ ಕಂಪನಿಯಾಗಿ ಬೆಳೆದಿತ್ತು.
ಹೆಚ್ಚಿನ ಸಂಖ್ಯೆಯ ಮೋಟಾರು ವಾಹನಗಳ ಆಗಮನ, ಜನರ ಜೀವನ ಶೈಲಿ ಮತ್ತು ಸಾರಿಗೆ ಆದ್ಯತೆಗಳು ಬದಲಾದ ಹಿನ್ನೆಲೆಯಲ್ಲಿ ಅಟ್ಲಾಸ್ ಸೈಕಲ್‌ಗಳೂ ಕೂಡ ಅಪ್ರಸ್ತುತವಾಗುತ್ತಾ ಹೋದವು. ಪರಿಣಾಮವಾಗಿ ಕಂಪನಿ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಯಿತು.
2014ರ ಹೊತ್ತಿಗೆ ಕಂಪನಿಯ ನಷ್ಟ ಇನ್ನಿಲ್ಲದಂತೆ ಏರುತ್ತಾ ಹೋಯಿತು. ಪರಿಣಾಮವಾಗಿ ಮಧ್ಯಪ್ರದೇಶದ ಮಲನ್‌ಪುರ ಎಂಬಲ್ಲಿದ್ದ ಉತ್ಪಾದನಾ ಘಟಕವನ್ನು 2014 ರ ಡಿಸೆಂಬರ್‌ನಲ್ಲಿ ಸ್ಥಗಿತಗೊಳಿಸಿತು. ಪರಿಸ್ಥಿತಿ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಹರಿಯಾಣದ ಸೋನಿಪತ್‌ನಲ್ಲಿರುವ ಘಟಕವನ್ನು 2018ರಲ್ಲಿ ಮುಚ್ಚಿತು. ಸೋನಿಪತ್ ಘಟಕ ಕಂಪನಿಯ ಮೊದಲ ಉತ್ಪಾದನಾ ಕೇಂದ್ರವಾಗಿತ್ತು. ಸದ್ಯ ದೆಹಲಿ ಹೊರವಲಯದ ಸಾಹಿಬಾಬಾದ್‌ನ ಅತಿದೊಡ್ಡ ಮತ್ತು ಕೊನೆಯ ಘಟಕವನ್ನು ಕಂಪನಿ ಮುಚ್ಚಿದೆ.
ಕಂಪನಿಯನ್ನು ಏಕಾಏಕಿ ಮುಚ್ಚಿದ್ದರ ವಿರುದ್ಧ ನೌಕರರು ಅಸಮಾಧಾನಗೊಂಡಿದ್ದಾರೆ. ಒಂದು ನೋಟಿಸ್ ಅನ್ನೂ ನೀಡದೆ, ಕಂಪನಿ ಮುಚ್ಚಲಾಗಿದೆ ಎಂದು ನೌಕರರ ಸಂಘಟನೆ ಆರೋಪಿಸಿದೆ. ಕಂಪನಿಯಲ್ಲಿ 1 ಸಾವಿರಕ್ಕೂ ಅಧಿಕ ನೌಕರರು ಕೆಲಸ ಮಾಡುತ್ತಿರುವುದಾಗಿ ಸಂಘಟನೆಯ ಅಧ್ಯಕ್ಷ ಮಹೇಶ್ ಕುಮಾರ್ ತಿಳಿಸಿದ್ದಾರೆ.
ಇನ್ನೊಂದೆಡೆ, ಕಂಪನಿ ನೌಕರರು ರಜಾ ದಿನಗಳನ್ನು ಹೊರತುಪಡಿಸಿ ಎಲ್ಲ ದಿನಗಳಲ್ಲೂ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವಂತೆಯೂ, ಹಾಜರಾತಿ ಆಧಾರದ ಮೇಲೆ, ವಜಾ ನೀತಿ ಅನುಸರಿಸಿ ವೇತನ ನೀಡುವುದಾಗಿಯೂ ಕಂಪನಿ ಹೇಳಿದೆ. ಅದರಂತೆ, ಕಂಪನಿಯು ನೌಕರರ ಮೂಲವೇತನದ ಅರ್ಧದಷ್ಟು ವೇತನವನ್ನು ಪಾವತಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.