ಮಮತಾ ಬ್ಯಾನರ್ಜಿ
– ಪಿಟಿಐ ಚಿತ್ರ
ಕೋಲ್ಕತ್ತ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದ ದಿನವನ್ನು ಭಾರತಕ್ಕೆ ಸಂದ ನಿಜದ ಸ್ವಾತಂತ್ರ್ಯವಾಗಿ ಆಚರಿಸಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿರುವುದು ಇತಿಹಾಸವನ್ನು ತಿರುಚುವ ಪ್ರಯತ್ನವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಪ್ರತಿಕ್ರಿಯಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ದಿನವನ್ನು ‘ಪ್ರತಿಷ್ಠಾ ದ್ವಾದಶಿ’ ಎಂದು ಆಚರಿಸಬೇಕು; ಇದೇ ನಿಜದ ಸ್ವಾಂತಂತ್ರ್ಯ ದಿನ ಎಂದು ಮೋಹನ್ ಭಾಗವತ್ ಬುಧವಾರ ಹೇಳಿದ್ದರು.
‘ಇದು ದೇಶವಿರೋಧಿಯೂ ಆತಂಕಕಾರಿಯೂ ಆದ ಹೇಳಿಕೆ. ಇದನ್ನು ನಾನು ಕಟುವಾಗಿ ವಿರೋಧಿಸುತ್ತೇನೆ. ದೇಶಕ್ಕಾಗಿ ಜೀವತ್ಯಾಗ ಮಾಡಲು ನಾವೂ ಸಿದ್ಧರಿದ್ದೇವೆ. ಸ್ವಾತಂತ್ರ್ಯ ಬಂದ ದಿನಕ್ಕೆ ಈಗಲೂ ಬದ್ಧರಾಗಿದ್ದೇವೆ. ಇತಿಹಾಸ ಬದಲಿಸುವ ಉದ್ದೇಶದ ಇಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ. ಈ ಹೇಳಿಕೆಯನ್ನು ವಾಪಸ್ ಪಡೆಯಬೇಕು’ ಎಂದು ಮಮತಾ ಆಗ್ರಹಿಸಿದ್ದಾರೆ.
‘ಸಂವಿಧಾನದಲ್ಲಿ ನಂಬಿಕೆ ಇಲ್ಲ ಎನ್ನುವುದರ ಬಿಂಬ’
ಸಂವಿಧಾನದಲ್ಲಿ ತಮಗೆ ನಂಬಿಕೆ ಇಲ್ಲ ಎನ್ನುವುದನ್ನು ಮೋಹನ್ ಭಾಗವತ್ ಅವರ ಹೇಳಿಕೆ ಸ್ಪಷ್ಟಪಡಿಸುತ್ತದೆ ಎಂದು ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರನ್ನೂ ಅವಮಾನಿಸುವಂತಹ ಹೇಳಿಕೆಯನ್ನು ಭಾಗವತ್ ನೀಡಿದ್ದಾರೆ. ಬಿಜೆಪಿಯವರು ರಾಹುಲ್ ಗಾಂಧಿ ಆಡಿದ ಮಾತನ್ನು ತಿರುಚಿ ಸಂವಹನ ಮಾಡುವ ಮೂಲಕ ತಪ್ಪಾಗಿ ಬಿಂಬಿಸುವ ಯತ್ನವನ್ನೂ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಕಾಂಗ್ರೆಸ್‌ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಕೇರಾ ಅವರೂ ಸುದ್ದಿಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.