ADVERTISEMENT

ಟರ್ಪೆಂಟೈನ್‌ ತೈಲ ಸಿದ್ಧಪಡಿಸಲು ವಿಮಾನ ಇಂಧನ ಕಳ್ಳಸಾಗಣೆ: ಆರು ಜನರ ಬಂಧನ

ಪಿಟಿಐ
Published 23 ಜೂನ್ 2025, 14:40 IST
Last Updated 23 ಜೂನ್ 2025, 14:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಯಿಟರ್ಸ್‌

ನವದೆಹಲಿ: ಮಿನರಲ್ ಟರ್ಪೆಂಟೈನ್‌ ತೈಲ ತಯಾರಿಸಲು ವಿಮಾನಕ್ಕೆ ಬಳಸುವ ಇಂಧನವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ದೆಹಲಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. 

ADVERTISEMENT

‘ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಈ ಹಗರಣದಿಂದಾಗಿ ರಾಷ್ಟ್ರದ ಬೊಕ್ಕಸಕ್ಕೆ ಮಾಸಿಕ ₹1.62 ಕೋಟಿ ನಷ್ಟವಾಗುತ್ತಿತ್ತು. ಇದರ ಸುಳಿವಿನ ಬೆನ್ನು ಹತ್ತಿದ ಪೊಲೀಸರು, ಟ್ಯಾಂಕರ್‌ನಿಂದ ನಿತ್ಯ 5 ಸಾವಿರ ಲೀಟರ್‌ ಇಂಧನ ಕಳ್ಳಸಾಗಣೆ ಮಾಡುತ್ತಿದ್ದ ಆರು ಜನರನ್ನು ಬಂಧಿಸಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಎಚ್‌ಪಿಸಿಎಲ್‌ ಅಸೊಡಾ ಡಿಪೊದಿಂದ ವಿಮಾನಕ್ಕೆ ಬಳಸುವ ಇಂಧನವು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪೂರೈಕೆಯಾಗುತ್ತಿತ್ತು. ಟ್ಯಾಂಕರ್‌ನ ಚಾಲಕ, ಪೂರೈಕೆದಾರ ಮತ್ತು ಗೋದಾಮಿನ ಮಾಲೀಕ ಶಾಮೀಲಾಗಿ ಜಿಪಿಎಸ್‌ ದಾಖಲೆಯನ್ನೇ ತಿರುಚಿದ್ದರು. ಇದರಿಂದ ವಿಮಾನ ನಿಲ್ದಾಣಕ್ಕೆ ಹೋಗಬೇಕಿದ್ದ ಟ್ಯಾಂಕರ್‌ ಅನ್ನು ಬೇರೆಡೆಗೆ ತಿರುಗಿಸಲಾಗುತ್ತಿತ್ತು’ ಎಂದು ಡಿಸಿಪಿ ಆದಿತ್ಯ ಗೌತಮ್ ತಿಳಿಸಿದ್ದಾರೆ.

‘ಗೋದಾಮಿನಿಂದ ಹೊರಟ ಟ್ಯಾಂಕರ್‌ಗೆ ಅಳವಡಿಸಿದ್ದ ಮುದ್ರೆಯನ್ನು ವಿಮಾನ ನಿಲ್ದಾಣದಲ್ಲಿ ಮಾತ್ರ ತೆರೆಯುವಂತೆ ವಿನ್ಯಾಸಗೊಳಿಸಲಾಗಿತ್ತು. ಆದರೆ ಮಾಸ್ಟರ್‌ ಕೀ ನಕಲು ಮಾಡಿದ್ದ ಈ ತಂಡ, ಅದನ್ನು ತೆರೆದು ಇಂಧನ ಕಳ್ಳತನ ಮಾಡುತ್ತಿದ್ದರು. ತಪ್ಪು ಲೆಕ್ಕ ನೀಡಲು ಟ್ಯಾಂಕ್‌ಗೆ ಅದ್ದುವ ಅಳತೆಗೋಲನ್ನೇ ನಕಲಿ ಮಾಡಿದ್ದರು. ಕದ್ದ ಇಂಧನವನ್ನು ಮಿನರಲ್ ಟರ್ಪೆಂಟೈನ್‌ ತೈಲ ಸಿದ್ಧಪಡಿಸುವವರಿಗೆ ಮಾರುತ್ತಿದ್ದರು. ಈ ತೈಲವನ್ನು ಇಂಕ್ ಮತ್ತು ಪೇಂಟ್ ತಯಾರಿಸುವ ಘಟಕಗಳು ಬಳಸುತ್ತವೆ. ಬಂಧಿತರಿಂದ 24 ಸಾವಿರ ಲೀಟರ್ ಇರುವ ಮೂರು ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ ಪೈಪ್‌, ಡ್ರಂ, ನಕಲಿ ಅಳತೆಗೋಲು, ಮೂರು ಮಾಸ್ಟರ್‌ ಕೀಗಳು ಮತ್ತು ನಗದನ್ನೂ ವಶಪಡಿಸಿಕೊಳ್ಳಲಾಗಿದೆ’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬಂಧಿತ ಗಯಾ ಪ್ರಸಾದ್ ಯಾದವ್ (43) ಚಾಲಕನ ಕೆಲಸ ಮಾಡುತ್ತಿದ್ದು ಈತ ವಿಮಾನ ಇಂಧನವನ್ನು ಪ್ರತಿ ಲೀಟರ್‌ಗೆ ₹30ರಂತೆ ಖರೀದಿಸಿ, ₹50ಕ್ಕೆ ಮಾರಾಟ ಮಾಡುತ್ತಿದ್ದ. ಇವನೊಂದಿಗೆ ರಾಜಕುಮಾರ ಚೌಧರಿ (53), ಅಶ್ಪಾಲ್‌ ಸಿಂಗ್ ಭುಲ್ಲರ್‌ (52), ರಾಮ್‌ ಭರೋಸ್ ಯಾದವ್ (44), ಅಂಜಯ್ ರಾಯ್ (41) ಮತ್ತು ಸುಬೋಧ್ ಕುಮಾರ್ ಯಾದವ್ (32) ಬಂಧಿತ ಇತರರು. ಟ್ರಕ್‌ನ ಸಹಾಯಕರಾದ ಪ್ರವೀಣ್‌ ಕುಮಾರ್ ಯಾದವ್‌ (25) ಮತ್ತು ಪ್ರವೀಣ್‌ ಕುಮಾರ್ ಯಾದವ್‌ (19) ಇವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿ ಟ್ರಿಪ್‌ಗೆ ತಲಾ ₹700ರಂತೆ ಪಡೆದು ಇವರು ಸಹಕರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.