ADVERTISEMENT

ವಿಮಾನಯಾನದ ಮುಂಚೂಣಿ ಕಾರ್ಮಿಕರಿಗೆ ಆದ್ಯತೆ ಮೇರೆಗೆ ಕೋವಿಡ್‌ ಲಸಿಕೆ ನೀಡಲು ಮನವಿ

ಪಿಟಿಐ
Published 24 ಜನವರಿ 2021, 6:24 IST
Last Updated 24 ಜನವರಿ 2021, 6:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆರೋಗ್ಯ ಕಾರ್ಯಕರ್ತರ ಬಳಿಕ ವಿಮಾನಯಾನ ಕ್ಷೇತ್ರದ ಮುಂಚೂಣಿ ಕಾರ್ಮಿಕರಿಗೆ ಆದ್ಯತೆಯ ಮೇರೆಗೆ ಕೋವಿಡ್‌ ಲಸಿಕೆಯ ನೀಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಮಾಡಿದೆ.

ಜನವರಿ 20ರಂದುನಾಗರಿಕ ವಿಮಾನಯಾನ ಸಚಿವಾಲಯದಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಅವರು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಈ ಸಂಬಂಧ ಪತ್ರ ಬರೆದಿದ್ದಾರೆ.

‘ಸುರಕ್ಷಿತ ವಿಮಾನ ಸೇವೆ ಒದಗಿಸುವ ವೇಳೆ ವಿಮಾನಯಾನ ಸಿಬ್ಬಂದಿ, ಎಂಜಿನಿಯರ್‌, ತಂತ್ರಜ್ಞರು ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್‌ ಅಪಾಯಗಳು ಎದುರಾಗಬಹುದು. ಹಾಗಾಗಿ ವಿಮಾನಯಾನ ಕ್ಷೇತ್ರದ ಈ ಕಾರ್ಯಕರ್ತರಿಗೂ ಆದ್ಯತೆಯ ಆಧಾರದಲ್ಲಿ ಕೋವಿಡ್‌ ಲಸಿಕೆ ನೀಡಬೇಕು’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರಿಗೆ ಬರೆದ ಪತ್ರದಲ್ಲಿ ಹೇಳಲಾಗಿದೆ.

ADVERTISEMENT

ಕಳೆದ ವರ್ಷ ಡಿಸೆಂಬರ್‌ 28ರಂದು ಬಿಡುಗಡೆ ಮಾಡಿದ ಮಾರ್ಗಸೂಚಿಗಳ ಪ್ರಕಾರ, ಪ್ರಾರಂಭದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಮಿಕರು ಮತ್ತು 50 ವರ್ಷ ಮೇಲ್ಪಟ್ಟ 27 ಕೋಟಿ ಜನರಿಗೆ ಕೋವಿಡ್‌ ಲಸಿಕೆ ನೀಡಲು ನಿರ್ಧರಿಸಲಾಗಿದೆ.

ಈ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾದ ಮುಂಚೂಣಿ ಕಾರ್ಮಿಕರಲ್ಲಿ ವಿಮಾನಯಾನ ಕ್ಷೇತ್ರದ ನೌಕರರು ಒಳಗೊಂಡಿಲ್ಲ. ಆದರೆ ಸಶಸ್ತ್ರ ಪಡೆಗಳ ಸಿಬ್ಬಂದಿ, ಜೈಲು ಸಿಬ್ಬಂದಿ, ನಗರ ಪಾಲಿಕೆಯ ಕಾರ್ಮಿಕರು ಸೇರಿದಂತೆ ಇತರರಿಗೆ ಆದ್ಯತೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.