
ಅಯತೊಲ್ಲಾ ಖಮೇನಿ
ಲಖನೌ: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ ಅಲ್ಲಿ 40 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.
ಅದೇ ರೀತಿ, ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಗ್ರಾಮವೊಂದು ಶೋಕ ಸಾಗರದಲ್ಲಿ ಮುಳುಗಿದೆ. ಅದಕ್ಕೆ ಕಾರಣ, ಈ ಗ್ರಾಮವು ಖಮೇನಿ ಕುಟುಂಬದೊಂದಿಗೆ ಐತಿಹಾಸಿಕ ನಂಟು ಹೊಂದಿದೆ.
ಖಮೇನಿ ಹತ್ಯೆ ಖಾತರಿಯಾಗುತ್ತಿದ್ದಂತೆಯೇ, ಇಲ್ಲಿನ ‘ಕಿಂಟೂರು’ ಗ್ರಾಮದಲ್ಲಿ ಬೇಸರದ ಜೊತೆಗೆ ಆಕ್ರೋಶ ಹುಟ್ಟುಹಾಕಿದೆ.
ಖಮೇನಿ ಅವರ ಅಜ್ಜ ಸೈಯದ್ ಅಹಮ್ಮದ್ ಮೌಸವಿ ಹಿಂದಿ ಅವರು ಕೂಡ ಇದೇ ಗ್ರಾಮದಲ್ಲಿ ಜನಿಸಿದ್ದರು. ಹೀಗಾಗಿ, ಖಮೇನಿ ಮೂಲದವರು ಇದೇ ಗ್ರಾಮದವರು ಎಂದು ಅವರ ವಂಶಸ್ಥರಾದ ಸೈಯದ್ ನಿಹಾಲ್ ಅಹಮ್ಮದ್ ಖಾಜ್ಮಿ ಎಂದು ನೆನಪಿಸಿಕೊಂಡರು.
ಒಂದು ಕಾಲದಲ್ಲಿ ಗ್ರಾಮದಲ್ಲಿ ‘ಮೌಸವಿ‘ ಕುಟುಂಬಸ್ಥರ 500 ಮನೆಗಳಿದ್ದವು. ಅವರನ್ನು ‘ಸೈಯದ್‌ವಾರಾ’ ಎಂದೇ ಕರೆಯಲಾಗುತ್ತಿತ್ತು. ಕ್ರಮೇಣ, ಇಲ್ಲಿನ ಕುಟುಂಬಸ್ಥರು ವಲಸೆ ಹೋಗಿದ್ದು, ಈಗ ಗ್ರಾಮದಲ್ಲಿ ಐದು ಕುಟುಂಬಗಳು ಮಾತ್ರ ಉಳಿದಿವೆ.
ಕಾಲಾನಂತರದಲ್ಲಿ ಗ್ರಾಮದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ, ಖಮೇನಿ ಕುಟುಂಬದ ಜೊತೆ ಹೊಂದಿದ ವಂಶಾವಳಿ ಹಾಗೂ ಭಾವನಾತ್ಮಕ ನಂಟನ್ನು ಇಲ್ಲಿನವರು ಮೆಲುಕು ಹಾಕುತ್ತಾರೆ.
‘ಮೌಸವಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಶಿಯಾ ಮುಸಲ್ಮಾನರ ಪ್ರಮುಖ ಧಾರ್ಮಿಕ ಸ್ಥಳವಾದ ಇರಾಕ್‌ನ ನಜಾಫ್ ಪಟ್ಟಣಕ್ಕೆ ವಲಸೆ ಹೋಗಿದ್ದರು. ನಂತರ ಭಾರತಕ್ಕೆ ಹಿಂತಿರುಗಲು ನಿರ್ಧರಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರು ಎಂಬ ಕಾರಣಕ್ಕೆ ಭಾರತಕ್ಕೆ ಮರಳಿ ಬರಲು ಬ್ರಿಟಿಷರು ಅನುಮತಿ ನೀಡಲಿಲ್ಲ. ಹೀಗಾಗಿ ಅವರು, 19ನೇ ಶತಮಾನದ ವೇಳೆಗೆ ಖೊಮೆನಿ ಪಟ್ಟಣದಲ್ಲಿಯೇ ನೆಲೆಯೂರಿದ್ದರು’ ಎಂದು ಖಾಜ್ಮಿ ವಿವರಿಸುತ್ತಾರೆ.
ಖಮೇನಿ ಅವರ ಸಾವು ಇಡೀ ಗ್ರಾಮಸ್ಥರಲ್ಲಿ ಆಘಾತ ಉಂಟು ಮಾಡಿದೆ. ‘ನಾವು ಅವರಿಗಾಗಿ ಶೋಕ ವ್ಯಕ್ತಪಡಿಸುತ್ತಿದ್ದೇವೆ. ಅದೇ ರೀತಿ, ಇರಾನ್‌ನಲ್ಲಿ ಸಿಲುಕಿರುವ ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವಂತೆ ಪ್ರಾರ್ಥಿಸುತ್ತಿದ್ದೇವೆ’ ಎಂದು ನಿವಾಸಿ ಸೈಯದ್ ಹುಸೈನ್ ಜೈದಿ ಹೇಳಿದ್ದಾರೆ.
ಲಖನೌ ನಗರದಲ್ಲಿರುವ ಅತ್ಯಂತ ಹಳೆಯ ಕಾಲೇಜು ನಿರ್ಮಾಣದಲ್ಲಿ ಕೂಡ ಖಮೇನಿ ಕುಟುಂಬಸ್ಥರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.
‘ಕಿಂಟೂರು’ ಗ್ರಾಮಸ್ಥರ ಪಾಲಿಗೆ ಖಮೇನಿ ವಿದೇಶಿ ನಾಯಕರಷ್ಟೇ ಅಲ್ಲ, ತಮ್ಮ ನೆಲದ ನಾಯಕರೇ ಎಂದೇ ಪರಿಗಣಿಸುತ್ತಾರೆ. ದಶಕಗಳ ಕಾಲ ಇರಾನ್ ಮುನ್ನಡೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.