ADVERTISEMENT

ಅಯೋಧ್ಯೆ ಪ್ರಕರಣ: ಸಂಧಾನ ಸಮಿತಿಯಲ್ಲಿರುವ ಮೂವರೂ ತಮಿಳುನಾಡಿನವರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 11:06 IST
Last Updated 8 ಮಾರ್ಚ್ 2019, 11:06 IST
ಎಫ್‌.ಎಂ. ಇಬ್ರಾಹಿಂ ಕಲೀಫುಲ್ಲಾ, ಶ್ರೀಶ್ರೀ ರವಿಶಂಕರ್ ಮತ್ತು ಶ್ರೀರಾಮ್ ಪಂಚು
ಎಫ್‌.ಎಂ. ಇಬ್ರಾಹಿಂ ಕಲೀಫುಲ್ಲಾ, ಶ್ರೀಶ್ರೀ ರವಿಶಂಕರ್ ಮತ್ತು ಶ್ರೀರಾಮ್ ಪಂಚು   

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ರಚಿಸಿರುವ ಸಂಧಾನ ಸಮಿತಿಯಲ್ಲಿರುವ ಮೂವರೂ ತಮಿಳುನಾಡಿನವರೇ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ. ಇಬ್ರಾಹಿಂ ಕಲೀಫುಲ್ಲಾ, ಆರ್ಟ್‌ ಆಫ್‌ ಲೀವಿಂಗ್‌ ಫೌಂಡೇಷನ್‌ನ ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನೊಳಗೊಂಡ ಸಂಧಾನ ಸಮಿತಿಯನ್ನು ಸುಪ್ರೀಂ ರಚಿಸಿದೆ.

2012–16ರ ಅವಧಿಯಲ್ಲಿಸುಪ್ರಿಂ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಕಲೀಫುಲ್ಲಾ ದಕ್ಷಿಣ ತಮಿಳುನಾಡಿನ ಕರೈಕುಡಿಯವರು. ಅದಕ್ಕೂ ಮೊದಲು ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು.ರವಿಶಂಕರ್‌ ಅವರ ಹುಟ್ಟೂರು ತಾಂಜಾವೂರು ಸಮೀಪದ ಪಾಪನಾಶಂ. ಪಂಚು ಚೆನ್ನೈ ಮೂಲದವರು.

ADVERTISEMENT

ಸುಪ್ರೀಂ ನೇಮಕದ ಬಳಿಕ ಮಾಧ್ಯಮಗಳಿಗೆ ಪ್ರತ್ಯೇಕವಾಗಿ ಹೇಳಿಕೆ ನೀಡಿರುವ ಮೂವರೂ, ದಶಕಗಳಿಗೂ ಹೆಚ್ಚು ಕಾಲದ ವಿವಾದವನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

‘ನನ್ನ ನೇತೃತ್ವದಲ್ಲಿ ಸುಪ್ರಿಂ ಕೋರ್ಟ್‌ ಸಂಧಾನ ಸಮಿತಿಯನ್ನು ರಚಿಸಿರುವುದು ತಿಳಿದಿದೆ. ಆದೇಶ ಪ್ರತಿ ಇನ್ನೂ ಕೈಸೇರಿಲ್ಲ. ಸೌಹಾರ್ದಯುತವಾಗಿ ವಿವಾದವನ್ನು ಇತ್ಯರ್ಥಪಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡಲಿದ್ದೇವೆ’ ಎಂದು ಕಲೀಫುಲ್ಲಾ ಹೇಳಿದ್ದಾರೆ.

‘ದೀರ್ಘಕಾಲದಿಂದ ಪರಿಹಾರ ಕಾಣದ ವಿವಾದವನ್ನು ಸುಖಾಂತ್ಯಗೊಳಿಸಿ, ಸಮಾಜದಲ್ಲಿ ಸೌಹಾರ್ದತೆಯನ್ನು ನೆಲೆಗೊಳಿಸಿಸುವ ಸಲುವಾಗಿ ನಾವೆಲ್ಲರೂ ಒಗ್ಗಟ್ಟಾಗಿ ಗುರಿಯೆಡೆಗೆ ಸಾಗಬೇಕಾಗಿದೆ’ ಎಂದು ರವಿಶಂಕರ್‌ ಅಭಿಪ್ರಾಯಪಟ್ಟಿದ್ದಾರೆ.

ಇದು ಗಂಭೀರವಾದ ಜವಾಬ್ದಾರಿಯಾಗಿದ್ದು, ತಮ್ಮಿಂದ ಸಾಧ್ಯವಾದಷ್ಟು ಉತ್ತಮವಾಗಿ ನಿರ್ವಹಿಸುವುದಾಗಿ ಪಂಚು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.