ಅಯೋಧ್ಯೆ ರಾಮಮಂದಿರ
(ಪಿಟಿಐ ಚಿತ್ರ)
ಅಯೋಧ್ಯೆ: ಹೊಸ ವರ್ಷ ಸಂಭ್ರಮಾಚರಣೆಗೆ ಅಯೋಧ್ಯೆ ನಗರ ಸಜ್ಜಾಗುತ್ತಿದ್ದು, ಭಾರಿ ಸಂಖ್ಯೆಯ ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ರಾಮ ಮಂದಿರದ ಬಾಲ ರಾಮನ ದರ್ಶನದ ಸಮಯವನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವರ್ಧಿಸಿದೆ.
ಡಿಸೆಂಬರ್ 30 ರಿಂದ ಜನವರಿಯ ಮೊದಲೆರಡು ವಾರಗಳವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ರಾಮ ಮಂದಿರಕ್ಕೆ ಭೇಟಿ ನೀಡುವ ನೀರಿಕ್ಷೆಯಿದೆ. ಜನಸಂದಣಿಯನ್ನು ನಿಭಾಯಿಸಲು ದೇವಾಲಯದ ಟ್ರಸ್ಟ್ ಸಮಗ್ರ ಸಿದ್ಧತೆಗಳನ್ನು ಮಾಡಿಕೊಂಡಿದೆ. ಎಲ್ಲಾ ಭಕ್ತರಿಗೆ ದೇವರ ದರ್ಶನ ಸಿಗಬೇಕೆಂಬ ಉದ್ದೇಶದಿಂದ ದರ್ಶನದ ಸಮಯವನ್ನು ವಿಸ್ತರಿಸಲಾಗಿದೆ ಎಂದು ಟ್ರಸ್ಟ್‌ನ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.
‘ರಾಮ ಮಂದಿರ, ಹನುಮಾನ್‌ಗಢಿ, ಲತಾ ಚೌಕ್, ಗುಪ್ತಾರ್ ಘಾಟ್, ಸೂರಜ್‌ಕುಂಡ ಮತ್ತು ಇತರ ಜನಪ್ರಿಯ ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ ಮತ್ತು ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ’ ಎಂದು ಅಯೋಧ್ಯೆ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕರಣ್ ನಯ್ಯರ್ ಹೇಳಿದ್ದಾರೆ.
ಅಯೋಧ್ಯೆ ಮತ್ತು ಸುತ್ತಮುತ್ತಲಿನ ನಗರಗಳಲ್ಲಿನ ಹೋಟೆಲ್‌ಗಳ ಕೊಠಡಿಗಳನ್ನು ಮುಂಚಿತವಾಗಿ ಕಾಯ್ದಿರಿಸಲಾಗಿದೆ. ಕೊಠಡಿಗಳಿಗೆ ಭಾರಿ ಬೇಡಿಕೆ ಬಂದಿರುವ ಕಾರಣ ಕೆಲವು ಹೋಟೆಲ್ ಮತ್ತು ಲಾಡ್ಜ್‌ಗಳು ಒಂದು ರಾತ್ರಿಯ ವಾಸ್ತವ್ಯಕ್ಕೆ ₹10,000 ಶುಲ್ಕ ವಿಧಿಸುತ್ತಿವೆ.
‘ಹೊಸ ವರ್ಷಕ್ಕೆ ಬರುವ ಭಕ್ತರನ್ನು ಸ್ವಾಗತಿಸಲು ನಾವು ಸಿದ್ಧರಾಗಿದ್ದೇವೆ. ಜನವರಿ 15ರವರೆಗೆ ನಮ್ಮ ಹೋಟೆಲ್‌ನ ಎಲ್ಲಾ ಕೊಠಡಿಗಳನ್ನು ಮುಂಚಿತವಾಗಿ ಕಾಯ್ದಿರಿಸಲಾಗಿದೆ’ ಎಂದು ಅಯೋಧ್ಯೆಯ ಸ್ಥಳೀಯ ಹೋಟೆಲ್ ಮಾಲೀಕ ಅಂಕಿತ್ ಮಿಶ್ರಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.