
ಅಯೋಧ್ಯೆಗೆ ₹2.5 ಕೋಟಿ ಮೌಲ್ಯದ ರಾಮನ ಕಲಾಕೃತಿ ದಾನ ಮಾಡಿದ ಬೆಂಗಳೂರು ಮೂಲದ ಮಹಿಳೆ
ಬೆಂಗಳೂರು: ಚಿನ್ನದ ಕುಸುರಿ, ಅಮೂಲ್ಯ ರತ್ನ ಹಾಗೂ ಹರಳುಗಳನ್ನು ಬಳಸಿ ತಯಾರಿಸಿದ 800 ಕೆ.ಜಿ ತೂಕದ, ₹2.5 ಕೋಟಿ ಬೆಲೆ ಬಾಳುವ ಸಾಂಪ್ರದಾಯಿಕ ತಂಜಾವೂರು ಶೈಲಿಯಲ್ಲಿರುವ ಶ್ರೀರಾಮನ ಕಲಾಕೃತಿಯನ್ನು ಅಂಚೆ ಇಲಾಖೆ ಲಾಜಿಸ್ಟಿಕ್ಸ್ ಮೂಲಕ ಬೆಂಗಳೂರಿನಿಂದ ಅಯೋಧ್ಯೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಈ ಕಲಾಕೃತಿಯನ್ನು ಬೆಂಗಳೂರಿನ ಜಯಶ್ರೀ ಫಣೀಶ್ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದು ಪಿಐಬಿ ಪ್ರಕಟಣೆ ತಿಳಿಸಿದೆ.
ಈ ಕಲಾಕೃತಿ 12 ಅಡಿ ಅಗಲ ಮತ್ತು 8 ಅಡಿ ಎತ್ತರವಿದೆ. ಮರದ ಚೌಕಟ್ಟಿನಲ್ಲಿ ಕಲಾಕೃತಿಯನ್ನು ಇರಿಸಲಾಗಿದ್ದು, ಮುಂಭಾಗದಲ್ಲಿ ಗ್ಲಾಸ್ ಅಳವಡಿಸಲಾಗಿದೆ.
ಡಿ.17ರಂದು ಬೆಂಗಳೂರಿನಿಂದ ಹೊರಟಿದ್ದ ಈ ಕಲಾಕೃತಿಯನ್ನು, 1,900 ಕಿ.ಮೀ ದೂರ ಸಾಗಿಸಿ ಡಿ.22ರಂದು ಅಯೋಧ್ಯೆ ರಾಮಮಂದಿರದಲ್ಲಿ ಇಳಿಸಲಾಗಿದೆ.
ಅಂಚೆ ಇಲಾಖೆಯು ಇದೇ ಮೊದಲ ಬಾರಿಗೆ ಇಷ್ಟು ಮೌಲ್ಯದ ವಸ್ತುವನ್ನು ಸಾಗಿಸಿರುವುದಾಗಿ ಹೇಳಿದೆ. ಬೆಂಗಳೂರಿನಿಂದ ಹೊರಟಿದ್ದ ಈ ಕಲಾಕೃತಿಯನ್ನು ಬೆಂಗಳೂರು, ಹೈದರಾಬಾದ್, ನಾಗ್ಪುರ, ಜಬಲ್ಪುರ, ರೇವಾ, ಪ್ರಯಾಗರಾಜ್ ಮೂಲಕ ಅಯೋಧ್ಯೆಗೆ ಸಾಗಿಸಲಾಗಿದೆ. ಈ ಮಾರ್ಗದಲ್ಲಿ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಅಂಚೆ ಇಲಾಖೆಯ ವಿಭಾಗೀಯ ಮುಖ್ಯಸ್ಥರು ಮತ್ತು ಹಿರಿಯ ಅಂಚೆ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದರು.
ಈ ಕಲಾಕೃತಿಯನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಸಮ್ಮುಖದಲ್ಲಿ ಕ್ಷೇತ್ರದ ಆವರಣದಲ್ಲಿ ಅಳವಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.