ಪಿಣರಾಯಿ ವಿಜಯನ್
(ಪಿಟಿಐ ಚಿತ್ರ)
ತಿರುವನಂತಪುರ: ಈಗಾಗಲೇ ಯೋಜಿಸಿದಂತೆ 'ಜಾಗತಿಕ ಅಯ್ಯಪ್ಪ ಸಂಗಮ' ಕಾರ್ಯಕ್ರಮ ನಡೆಯಲಿದ್ದು, ಬೆದರಿಕೆ ಒಡ್ಡುವ ಮೂಲಕ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಹಿಂದೂಗಳನ್ನು ಅವಮಾನಿಸಿದ್ದಕ್ಕಾಗಿ ಕೇರಳ ಸಿಎಂ ಹಾಗೂ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕ್ಷಮೆಯಾಚಿಸದ್ದಲ್ಲಿ ಅಯ್ಯಪ್ಪ ಭಕ್ತರ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ತಡೆಯುವುದಾಗಿ ಬಿಜೆಪಿ ಕೇರಳ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.
ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿದ್ದರ ವಿರುದ್ಧ ದಾಖಲಿಸಿದ್ದ ಪ್ರಕರಣರನ್ನು ರದ್ದುಗೊಳಿಸುವಂತೆಯೂ ಚಂದ್ರಶೇಖರ್ ಒತ್ತಾಯಿಸಿದ್ದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇರಳ ಸಿಎಂ, 'ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತನ್ನ 75ನೇ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತಿದೆ' ಎಂದು ಹೇಳಿದ್ದಾರೆ.
'ಇದು ಸರ್ಕಾರಿ ಕಾರ್ಯಕ್ರಮವಲ್ಲ. ಆದ್ದರಿಂದ ಕಾರ್ಯಕ್ರಮ ಸುಗಮವಾಗಿ ನಡೆಯಲಿ. ಅಲ್ಲದೆ ಕಾರ್ಯಕ್ರಮಕ್ಕೆ ಯಾರೂ ಸಹ ಬೆದರಿಕೆ ಹಾಕುವ ಅಗತ್ಯವಿಲ್ಲ. ಈ ಕಾರ್ಯಕ್ರಮವನ್ನು ತಡೆಯಲು ಸಾಧ್ಯವಿಲ್ಲ' ಎಂದಿದ್ದಾರೆ.
'ಬಹುಶಃ ಕೇರಳದ ಪರಿಸ್ಥಿತಿ ಬಗ್ಗೆ ರಾಜೀವ್‌ಗೆ ತಿಳುವಳಿಕೆ ಇಲ್ಲದಿರಬಹುದು. ಅದಕ್ಕಾಗಿಯೇ ಬೆದರಿಕೆಯ ರೀತಿಯಲ್ಲಿ ಮಾತನಾಡುತ್ತಾರೆ' ಎಂದು ಹೇಳಿದ್ದಾರೆ.
'ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅಡ್ಡಿಪಡ್ಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮನವಿಯ ಮೇರೆಗೆ ಈಗಾಗಲೇ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೊರತುಪಡಿಸಿ ಇತರೆಲ್ಲ ಪ್ರಕರಣಗಳನ್ನು ಹಿಂಪಡೆಯಲಾಗಿದೆ' ಎಂದು ಅವರು ತಿಳಿಸಿದ್ದಾರೆ.
'ಶಬರಿಮಲೆಗೆ ಎಲ್ಲ ಧರ್ಮ, ಜಾತಿಗಳ ಲಕ್ಷಾಂತರ ಮಂದಿ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಹಾಗಾಗಿ ಅಂತಹ ಕಾರ್ಯಕ್ರಮ ನಡೆದಾಗ ಅದರ ಭಾಗವಾಗಲು ಪ್ರತಿಯೊಬ್ಬರೂ ಬಯಸುತ್ತಾರೆ. ದೇಶದಲ್ಲೇ ಶಬರಿಮಲೆ ಮಾದರಿ ಪೂಜಾ ಕೇಂದ್ರವಾಗಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.
ಕೇರಳ ಸರ್ಕಾರದ ಸಹಯೋಗದಲ್ಲಿ ಟಿಡಿಟಿ 'ಜಾಗತಿಕ ಅಯ್ಯಪ್ಪ ಸಂಗಮ'ವನ್ನು ಸೆಪ್ಟೆಂಬರ್ 20ರಂದು ಪಂಪಾದಲ್ಲಿ ಆಯೋಜಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.