ಲಖನೌ: ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕವಿದ್ದ, ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್‌ನ ‘ಸಕ್ರಿಯ ಉಗ್ರ’ನನ್ನು ಉತ್ತರ ಪ್ರದೇಶದ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಲಜರ್ ಮಾಸಿಹ್ ಎಂದು ಗುರುತಿಸಲಾಗಿರುವ ಈ ಉಗ್ರನನ್ನು ಉತ್ತರ ಪ್ರದೇಶದ ಎಸ್‌ಟಿಎಫ್ ಮತ್ತು ಪಂಜಾಬ್‌ನ ಪೊಲೀಸರು ಕೌಶಂಬಿ ಜಿಲ್ಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದರು.
‘ಮಹಾಕುಂಭಮೇಳ ಅವಧಿಯಲ್ಲಿ ದಾಳಿ ನಡೆಸಲೂ ಈತ ಸಂಚು ರೂಪಿಸಿದ್ದ. ಆದರೆ, ಬಿಗಿ ತಪಾಸಣೆ ಇದ್ದ ಕಾರಣ ಯೋಜನೆ ಜಾರಿಗೊಳಿಸುವುದು ಸಾಧ್ಯವಾಗಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ಯೋಜನೆ ವಿಫಲವಾದ ಹಿಂದೆಯೇ ನಕಲಿ ಪಾಸ್‌ಪೋರ್ಟ್ ಬಳಸಿ ಪೋರ್ಚುಗಲ್‌ಗೆ ಪರಾರಿ ಆಗಲು ಯತ್ನಿಸಿದ್ದ. ಈಗಾಗಲೇ ದುಬೈಗೆ ಪರಾರಿ ಆಗಿರುವ ಬಬ್ಬರ್ ಖಾಲ್ಸಾ ಸಂಘಟನೆಯ ಸದಸ್ಯನ ಜೊತೆಗೂ ಸಂಪರ್ಕವೊಂದಿದ್ದ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
‘ಬಂಧಿತ ಮಾಸಿಹ್ ಅಮೃತಸರದ ಕುರ್ಲಿಯಾನ್ ಗ್ರಾಮದ ನಿವಾಸಿ. ಪಾಕ್ ಐಎಸ್‌ಐನ ಮೂವರು ಏಜೆಂಟರ ಜೊತೆಗೆ ಸಂಪರ್ಕದಲ್ಲಿದ್ದ. ಶಸ್ತ್ರಾಸ್ತ್ರ, ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಹಿಂದೆ ಬಂಧಿಸಲಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾಗ 2024ರ ಸೆಪ್ಟೆಂಬರ್‌ನಲ್ಲಿ ಪಾರಾಗಿದ್ದ. ನಂತರ ಪಂಜಾಬ್‌ನ ಬಟಾಲಾದಲ್ಲಿ ಅಕ್ಟೋಬರ್ ತಿಂಗಳಲ್ಲಿ ಗುಂಡಿನ ದಾಳಿ ನಡೆಸಿದ್ದ ಎಂದು ತಿಳಿಸಿದರು.
ಈತನ ಬಂಧನದ ಹಿಂದೆಯೇ ಪಾಕಿಸ್ತಾನದಿಂದ ಡ್ರೋನ್ ಬಳಸಿ ಹಾಗೂ ಇತರೆ ಮಾರ್ಗದಲ್ಲಿ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡಲಾಗುತ್ತಿತ್ತೇ ಎಂಬ ನಿಟ್ಟಿನಲ್ಲಿ ತನಿಖೆ ನಡೆದಿದೆ ಎಂದು ತಿಳಿಸಿದರು.
ಗ್ರನೇಡ್‌ಗಳನ್ನು ಪೂರೈಸುವ ಕೆಲಸವನ್ನೂ ಮಾಸಿಹ್ ಮಾಡುತ್ತಿದ್ದ. ಇವುಗಳನ್ನು ‘ಆಲೂಗಡ್ಡೆ’ ಎಂಬ ಕೋಡ್ ಬಳಸಿ ಗುರುತಿಸಲಾಗುತ್ತಿತ್ತು. ಪಿಲಿಭಿಟ್‌ನಲ್ಲಿ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದ ಉಗ್ರ ವಿರೇಶ್ ಸಿಮಗ್ ಅಲಿಯಾಸ್ ರವಿ ಜೊತೆಗೂ ಈತನಿಗೆ ಸಂಪರ್ಕವಿತ್ತು ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.