ADVERTISEMENT

ರೋಗ ನಿರೋಧಕಕ್ಕೆ ಸಮತೋಲಿತ ಆಹಾರ

ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 19:20 IST
Last Updated 19 ಏಪ್ರಿಲ್ 2020, 19:20 IST
   

ಹೈದರಾಬಾದ್‌: ‘ಸಮತೋಲಿತ ಆಹಾರಕ್ರಮ ಮತ್ತು ಜೀವನಶೈಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಮುಖ ಅಸ್ತ್ರವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಪೌಷ್ಟಿಕಾಂಶ ಸಂಸ್ಥೆ ತಿಳಿಸಿವೆ.

ಹಣ್ಣು, ತರಕಾರಿ ಮತ್ತು ಧಾನ್ಯಗಳಲ್ಲಿ ಹೇರಳವಾಗಿರುವ ಸೂಕ್ಷ್ಮ ಪೋಷಕಾಂಶಗಳು (ಜೀವಸತ್ವಗಳು ಮತ್ತು ಖನಿಜಗಳು) ನಮ್ಮೊಳಗಿನ ಮತ್ತು ಹೊಸದಾಗಿ ಉತ್ಪತ್ತಿಯಾಗುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಸೋಂಕು ಬೇರೆಯವರಿಂದ ತಗಲುವುದನ್ನು ನಿಯಂತ್ರಿಸುತ್ತದೆ ಎಂದುರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್‌ಐಎನ್‌) ತಿಳಿಸಿದೆ. ಇದುಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಅಧೀನದ ಪ್ರಮುಖ ಸಂಸ್ಥೆಯಾಗಿದೆ.

ತರಕಾರಿ, ಹಣ್ಣು, ಬೇಳೆಕಾಳು, ಸಿರಿಧಾನ್ಯ‌ ಮತ್ತು ಮೊಸರನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸಲು ನೆರವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

‘ಅಂಗಾಂಶಗಳ ದುರಸ್ತಿ ಹಾಗೂ ನಿರ್ವಹಣೆಗೆ ಸೂಕ್ಷ್ಮ ಪೋಷಕಾಂಶಗಳು ಸಹಕರಿಸುತ್ತವೆ. ಸೋಂಕು ಮತ್ತು ರೋಗನಿರೋಧಕ ಪ್ರಕ್ರಿಯೆಯ ಸಮಯದಲ್ಲಿ ದೇಹದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾಗುವ ವಿಷಕಾರಕ ಅಂಶವನ್ನು ಹೊರಹಾಕಲು ಇದು ನೆರವಾಗುತ್ತದೆ’ ಎಂದು ಎನ್‌ಐಎನ್‌ ನಿರ್ದೇಶಕ ಹೇಮಲತಾ ಆರ್‌. ತಿಳಿಸಿದ್ದಾರೆ.

‘ಪಪ್ಪಾಯಿ, ಪೇರಳೆ, ಸೇಬು, ದ್ರಾಕ್ಷಿ, ಮಾವು, ಕಿತ್ತಳೆ, ನೆಲ್ಲಿಕಾಯಿ, ಲಿಂಬು ಮತ್ತು ಎಲ್ಲಾ ಋತುಮಾನದ ತರಕಾರಿ, ಸೊಪ್ಪು, ದ್ವಿದಳ ಧಾನ್ಯ,ಮಾಂಸದ ಆಹಾರ, ಮೀನುಗಳು ಪೋಷಕಾಂಶಗಳ ಸಮೃದ್ಧ ಮೂಲವನ್ನು ಹೊಂದಿವೆ.

‘ಸಂಸ್ಕರಿಸಿದ ಆಹಾರ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸದಿರಿ.ಮಾಂಸ, ಕೋಳಿ ಮತ್ತು ಮೊಟ್ಟೆಗಳನ್ನು ಸೇವಿಸುವುದು ಅಪಾಯಕಾರಿಯಲ್ಲ, ಆದರೆ ಅವುಗಳನ್ನು ಸ್ವಚ್ಛವಾಗಿ ತೊಳೆಯಿರಿ.ಚೆನ್ನಾಗಿ ನೀರು ಕುಡಿಯಿರಿ, ವ್ಯಾಯಾಮ ಮಾಡಿ, ಮದ್ಯಪಾನ, ಧೂಮಪಾನ ಸೇವನೆ ಮಾಡದಿರಿ’ ಎಂದು ಸಲಹೆ ನೀಡಿದ್ದಾರೆ.

ಬಡವರು ಮತ್ತು ಕಾರ್ಮಿಕರಿಗೆ ಉಚಿತವಾಗಿ ವಿತರಿಸುತ್ತಿರುವ ಆಹಾರ ಮತ್ತು ದಿನಸಿ ಸಾಮಗ್ರಿಗಳಲ್ಲಿ ಯಾವ ಪ್ರಮಾಣದಲ್ಲಿ ಪೌಷ್ಟಿಕಾಂಶವಿರಬೇಕು ಎಂಬುದರ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಮಲತಾ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.