ADVERTISEMENT

ಹರಿದ್ವಾರದ ಗಂಗಾ ಘಾಟ್‌ಗೆ ಹಿಂದೂಯೇತರರ ಪ್ರವೇಶ ನಿಷೇಧಕ್ಕೆ ಗಂಗಾ ಸಭಾ ಒತ್ತಾಯ

ಪಿಟಿಐ
Published 15 ಜನವರಿ 2026, 2:37 IST
Last Updated 15 ಜನವರಿ 2026, 2:37 IST
<div class="paragraphs"><p>ಶ್ರಾವಣಮಾಸದಲ್ಲಿ ಗಂಗಾ ನದಿಯಿಂದ ಪವಿತ್ರ ನೀರು ಸಂಗ್ರಹಿಸಲು ಕಾವಡ್‌ ಯಾತ್ರಾರ್ಥಿಗಳು ಭಾನುವಾರ ಹರಿದ್ವಾರದ ಹರ್‌ ಕಿ ಪೌಡಿ ಘಾಟ್‌ನಲ್ಲಿ ಸೇರಿದ್ದರು– ಪ್ರಜಾವಾಣಿ ಚಿತ್ರ</p></div>

ಶ್ರಾವಣಮಾಸದಲ್ಲಿ ಗಂಗಾ ನದಿಯಿಂದ ಪವಿತ್ರ ನೀರು ಸಂಗ್ರಹಿಸಲು ಕಾವಡ್‌ ಯಾತ್ರಾರ್ಥಿಗಳು ಭಾನುವಾರ ಹರಿದ್ವಾರದ ಹರ್‌ ಕಿ ಪೌಡಿ ಘಾಟ್‌ನಲ್ಲಿ ಸೇರಿದ್ದರು– ಪ್ರಜಾವಾಣಿ ಚಿತ್ರ

   

ಹರಿದ್ವಾರ: ಹರಿದ್ವಾರದ ಕುಂಭ ಪ್ರದೇಶದ ವ್ಯಾಪ್ತಿಯ ಎಲ್ಲ ಗಂಗಾ ಘಾಟ್‌ಗಳಲ್ಲಿ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಬೇಕೆಂಬ ಬೇಡಿಕೆಗಳ ನಡುವೆ, ಗಂಗಾ ಸಭಾ ಬುಧವಾರ ಈ ನಿರ್ಬಂಧವು ಸರ್ಕಾರಿ ಇಲಾಖೆಗಳು, ಸಂಸ್ಥೆಗಳು ಮತ್ತು ಮಾಧ್ಯಮ ಸಿಬ್ಬಂದಿಗೂ ಅನ್ವಯಿಸಬೇಕು ಎಂದು ಹೇಳಿದೆ.

ಹರ್ ಕಿ ಪೌರಿ ಮತ್ತು ಸುತ್ತಮುತ್ತಲಿನ ಗಂಗಾ ಘಾಟ್‌ಗಳನ್ನು ನಿರ್ವಹಿಸುವ ಗಂಗಾ ಸಭಾದ ಅಧ್ಯಕ್ಷ ನಿತಿನ್ ಗೌತಮ್, ಹರಿದ್ವಾರದ ಜಿಲ್ಲಾ ಮಾಹಿತಿ ಅಧಿಕಾರಿ ಮತ್ತು ಇತರ ಇಲಾಖೆಗಳು ಹಾಗೂ ಸಂಸ್ಥೆಗಳ ಅಧಿಕಾರಿಗಳಿಗೆ ತಮ್ಮ ಇಲಾಖೆಯಿಂದ ಯಾವುದೇ ಹಿಂದೂಯೇತರ ವ್ಯಕ್ತಿ ಹರ್ ಕಿ ಪೌರಿಗೆ ಪ್ರವೇಶಿಸದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದರು.

ADVERTISEMENT

‘ಅದು ಸರ್ಕಾರಿ ಇಲಾಖೆಯಾಗಿರಲಿ, ಸಂಸ್ಥೆಯಾಗಿರಲಿ ಅಥವಾ ಮಾಧ್ಯಮ ವ್ಯಕ್ತಿಯಾಗಿರಲಿ, ಕುಂಭ ಪ್ರದೇಶದ ಈ ಸ್ಥಳಗಳಲ್ಲಿ ಎಲ್ಲಾ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಬೇಕು’ಎಂದು ಗೌತಮ್ ಹೇಳಿದರು.

ಸನಾತನ ಸಂಪ್ರದಾಯ, ಗಂಗಾ ಮಾತೆಯ ಧಾರ್ಮಿಕ ಗುರುತು ಮತ್ತು ಹರ್ ಕಿ ಪೌರಿಯ ಪಾವಿತ್ರ್ಯತೆ ಅತ್ಯುನ್ನತವಾದುದು ಎಂದು ಗೌತಮ್ ಹೇಳಿದ್ದಾರೆ.

1916ರ ಹರಿದ್ವಾರ ಮುನ್ಸಿಪಲ್ ಕಾರ್ಪೊರೇಷನ್ ಬೈಲಾಗಳು ಧಾರ್ಮಿಕ ಭಾವನೆಗಳನ್ನು ಆಧರಿಸಿವೆ. ಬೈಲಾಗಳು ಹರ್ ಕಿ ಪೌರಿ ಮತ್ತು ಸುತ್ತಮುತ್ತಲಿನ ಗಂಗಾ ಘಾಟ್‌ಗಳಲ್ಲಿ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುತ್ತವೆ ಎಂದು ಅವರು ಹೇಳಿದರು. ಈ ವ್ಯವಸ್ಥೆಯನ್ನು ಸಾಂವಿಧಾನಿಕ ಹಕ್ಕುಗಳ ಅಡಿಯಲ್ಲಿ ಜಾರಿಗೆ ತರಬೇಕು ಎಂದು ತಿಳಿಸಿದ್ದಾರೆ.

ಮಂಗಳವಾರ ಹರ್ ಕಿ ಪೌರಿಯಲ್ಲಿ ಇಬ್ಬರು ಯುವಕರು ಅರಬ್ ಶೇಖ್‌ಗಳ ಉಡುಪಿನಲ್ಲಿ ಓಡಾಡುತ್ತಾ ವಿಡಿಯೊಗಳನ್ನು ಮಾಡುತ್ತಿರುವುದನ್ನು ಉಲ್ಲೇಖಿಸಿದ ಗೌತಮ್, ಕೆಲವರು ವೇಷ ಧರಿಸಿ ಪ್ರದೇಶಕ್ಕೆ ಪ್ರವೇಶಿಸುವ ಮೂಲಕ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಹರ್ ಕಿ ಪೌರಿ ಮತ್ತು ಸುತ್ತಮುತ್ತಲಿನ ಘಾಟ್‌ಗಳಲ್ಲಿ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ಫಲಕಗಳನ್ನು ಅಳವಡಿಸಬೇಕು ಮತ್ತು ಪ್ರದೇಶದ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಆಡಳಿತವು ಸಂಪೂರ್ಣ ಜಾಗರೂಕರಾಗಿರಬೇಕು ಎಂದು ಅವರು ಒತ್ತಾಯಿಸಿದರು.

ಈ ವಿಷಯದ ಬಗ್ಗೆ ಈಗಾಗಲೇ ಎಲ್ಲ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಯಾವುದೇ ಹಿಂದೂಯೇತರ ಉದ್ಯೋಗಿಯನ್ನು ಈ ಪ್ರದೇಶದಲ್ಲಿ ನಿಯೋಜಿಸದಂತೆ ನೋಡಿಕೊಳ್ಳಲು ಅವರಿಗೆ ಮನವಿ ಮಾಡಲಾಗಿದೆ ಎಂದು ಗೌತಮ್ ಹೇಳಿದರು.

ನಿರ್ಬಂಧಿತ ಪ್ರದೇಶಕ್ಕೆ ಹಿಂದೂಯೇತರ ಪತ್ರಕರ್ತರನ್ನು ನಿಯೋಜಿಸದಂತೆ ಮಾಧ್ಯಮ ಸಂಸ್ಥೆಗಳನ್ನು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.