ADVERTISEMENT

ರಾಷ್ಟ್ರಪತಿ ಚುನಾವಣೆ: ಕಲಾಂಗೂ ಮುನ್ನ ಅಟಲ್‌ ಹೆಸರು

ಬಿಜೆಪಿಯಲ್ಲಿ ನಡೆದಿತ್ತು ಚರ್ಚೆ | ಕೃತಿಯಲ್ಲಿ ಉಲ್ಲೇಖಿಸಿದ ವಾಜಪೇಯಿ ಅವರ ಮಾಧ್ಯಮ ಸಲಹೆಗಾರ

ಪಿಟಿಐ
Published 17 ಡಿಸೆಂಬರ್ 2025, 15:59 IST
Last Updated 17 ಡಿಸೆಂಬರ್ 2025, 15:59 IST
ಅಟಲ್ ಬಿಹಾರಿ ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ   

ನವದೆಹಲಿ (ಪಿಟಿಐ): ರಾಷ್ಟ್ರಪತಿ ಹುದ್ದೆಗೆ ಎಪಿಜೆ ಅಬ್ದುಲ್‌ ಕಲಾಂ ಅವರಿಗೂ ಮೊದಲು ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಉಮೇದುವಾರಿಕೆಗೆ ಪರಿಗಣಿಸಲು ಬಿಜೆಪಿಯಲ್ಲಿ ಚರ್ಚೆ ನಡೆದಿತ್ತು ಎಂದು ವಾಜಪೇಯಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಅಶೋಕ್‌ ಟಂಡನ್‌ ಅವರು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. 

ಉಪ ಪ್ರಧಾನಿಯಾಗಿದ್ದ ಎಲ್‌.ಕೆ.ಅಡ್ವಾಣಿ ಅವರನ್ನು ಪ್ರಧಾನಿ ಹುದ್ದೆಗೇರಿಸುವ ಸಲಹೆಗಳು ಬಿಜೆಪಿಯಲ್ಲಿ ಬಂದಿದ್ದವು. ಈ ಪ್ರಸ್ತಾವವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದ ವಾಜಪೇಯಿ ಅವರು ತಾನು ಪಡೆದಿರುವ ಬಹುಮತದ ಬಲದಿಂದ ರಾಷ್ಟ್ರಪತಿ ಆಗುವುದು ಸರಿಯಾದ ಕ್ರಮವಲ್ಲ, ಅದು ಒಳ್ಳೆಯ ಪೂರ್ವ ನಿದರ್ಶನ ಆಗದು ಎಂದಿದ್ದರು ಎಂಬುದಾಗಿ ಅವರು ಬರೆದಿದ್ದಾರೆ. 

ವಾಜಪೇಯಿ ಅವರ ಮಾಧ್ಯಮ ಸಲಹೆಗಾರರಾಗಿ 1998ರಿಂದ 2004ರವರೆಗೆ ಕಾರ್ಯನಿರ್ವಹಿಸಿದ್ದ ಅಶೋಕ್‌ ಟಂಡನ್‌ ಅವರು ತನ್ನ ‘ಅಟಲ್‌ ಸಂಸ್ಮರಣ್‌’ ಪುಸ್ತಕದಲ್ಲಿ ಈ ಕುರಿತು ಪ್ರಸ್ತಾಪಿಸಿದ್ದಾರೆ. ಕೃತಿಯನ್ನು ಪ್ರಭಾತ್‌ ಪ್ರಕಾಶನ ಪ್ರಕಟಿಸಿದೆ. ವಾಜಪೇಯಿ ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ನಡೆದ ಅನೇಕ ಘಟನೆಗಳು ಮತ್ತು ಹಲವು ನಾಯಕರ ಜತೆಗೆ ವಾಜಪೇಯಿ ಅವರ ಸಂಬಂಧಗಳ ಬಗ್ಗೆ ಕೃತಿಯಲ್ಲಿ ವಿವರಿಸಿದ್ದಾರೆ.

ADVERTISEMENT

ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷದ ಬೆಂಬಲದಿಂದ ಕಲಾಂ ಅವರು 2002ರಲ್ಲಿ ದೇಶದ 11ನೇ ರಾಷ್ಟ್ರಪತಿಯಾಗಿ ಚುನಾಯಿತರಾದರು. ಅವರು 2007ರವರೆಗೂ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು.  

ಕೃತಿಯಲ್ಲಿರುವ ಪ್ರಮುಖಾಂಶಗಳು

* ವಾಜಪೇಯಿ ಅವರು ರಾಷ್ಟ್ರಪತಿ ಹುದ್ದೆಗೇರಲು ಮತ್ತು ಅಡ್ವಾಣಿ ಅವರಿಗೆ ಪ್ರಧಾನಿ ಹುದ್ದೆ ಹಸ್ತಾಂತರಿಸಲು ನಿರಾಕರಿಸಿದ್ದರು.

* ಯಾವುದೇ ಜನಪ್ರಿಯ ಪ್ರಧಾನಿಯು ತನ್ನ ಬಹುಮತದ ಬಲದಿಂದ ರಾಷ್ಟ್ರಪತಿ ಆಗುವುದು ಭಾರತದ ಸಂಸದೀಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಸಂಕೇತವಲ್ಲ. ಅದು ತಪ್ಪು ಸಂಪ್ರದಾಯಕ್ಕೆ ನಾಂದಿಯಾಗುತ್ತದೆ. ಅಂಥ ನಡೆಯನ್ನು ಬೆಂಬಲಿಸುವ ಕೊನೆಯ ವ್ಯಕ್ತಿ ತಾನು ಎಂದು ವಾಜಪೇಯಿ ಹೇಳಿದ್ದರು.

* ರಾಷ್ಟ್ರಪತಿ ಹುದ್ದೆಗೆ ಒಮ್ಮತ ಮೂಡಿಸಲು ವಾಜಪೇಯಿ ಅವರು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ನ ನಾಯಕರನ್ನು ಸಭೆಗೆ ಆಹ್ವಾನಿಸಿದ್ದರು.

* ಸೋನಿಯಾ ಗಾಂಧಿ, ಪ್ರಣಬ್‌ ಮುಖರ್ಜಿ, ಮನಮೋಹನ ಸಿಂಗ್‌ ಅವರು ಪ್ರಧಾನಿ ಜತೆಗಿನ ಸಭೆಗೆ ಬಂದಿದ್ದರು. ಈ ವೇಳೆ ರಾಷ್ಟ್ರಪತಿ ಚುನಾವಣೆಗೆ ಎಪಿಜೆ ಅಬ್ದುಲ್‌ ಕಲಾಂ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲು ನಿರ್ಧರಿಸಲಾಗಿದೆ ಎಂದು ವಾಜಪೇಯಿ ಮೊದಲ ಬಾರಿಗೆ ಅಧಿಕೃತವಾಗಿ ಬಹಿರಂಗಪಡಿಸಿದರು. ಆಗ ಸಭೆಯಲ್ಲಿ ಒಂದು ಕ್ಷಣ ಮೌನ ಆವರಿಸಿತ್ತು.

* ಕೆಲ ಕ್ಷಣದ ಬಳಿಕ ಮೌನ ಮುರಿದ ಸೋನಿಯಾ ಗಾಂಧಿ ಅವರು ಈ ಆಯ್ಕೆಗೆ ಆಶ್ಚರ್ಯ ವ್ಯಕ್ತಪಡಿಸಿದರು. ಕಲಾಂ ಅವರನ್ನು ಬೆಂಬಲಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದೂ ಹೇಳಿದರು. ಅದಾಗ್ಯೂ ಈ ಪ್ರಸ್ತಾವವನ್ನು ಚರ್ಚಿಸಿ, ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.

* ಅಟಲ್‌ ಮತ್ತು ಅಡ್ವಾಣಿ ಅವರ ನಡುವೆ ಕೆಲ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಇಬ್ಬರ ನಡುವಿನ ಸಂಬಂಧ ಸಾರ್ವಜನಿಕವಾಗಿ ಎಂದಿಗೂ ಹದಗೆಟ್ಟಿರಲಿಲ್ಲ. ಅಡ್ವಾಣಿ ಅವರು ಅಟಲ್‌ ಅವರನ್ನು ‘ನನ್ನ ನಾಯಕ ಮತ್ತು ಸ್ಪೂರ್ತಿಯ ಮೂಲ’ ಎನ್ನುತ್ತಿದ್ದರೆ, ವಾಜಪೇಯಿ ಅವರು ಅಡ್ವಾಣಿ ಅವರನ್ನು ‘ದೃಢನಿಷ್ಠೆಯ ಒಡನಾಡಿ’ ಎಂದು ಕರೆಯುತ್ತಿದ್ದರು.

ಅಟಲ್‌– ಸೋನಿಯಾ ಫೋನ್‌ ಸಂಭಾಷಣೆ

2001ರ ಡಿಸೆಂಬರ್‌ 13ರಂದು ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆದಾಗ ವಾಜಪೇಯಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ನಡುವೆ ಫೋನ್‌ ಸಂಭಾಷಣೆ ನಡೆಯಿತು ಎಂದು ಟಂಡನ್‌ ಉಲ್ಲೇಖಿಸಿದ್ದಾರೆ. ದಾಳಿಗೆ ಪ್ರತಿಯಾಗಿ ಭದ್ರತಾ ಪಡೆಗಳು ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಅಟಲ್‌ ಅವರು ಟಿ.ವಿಯಲ್ಲಿ ವೀಕ್ಷಿಸುತ್ತಿದ್ದರು. ಈ ವೇಳೆ ಸೋನಿಯಾ ಗಾಂಧಿ ಅವರ ಕರೆ ಬಂದಿತು. ‘ನನಗೆ ನಿಮ್ಮ ಬಗ್ಗೆ ಚಿಂತೆಯಾಗಿದೆ ನೀವು ಸುರಕ್ಷಿತರಾಗಿದ್ದೀರಾ?’ ಎಂದು ಅವರು ಪ್ರಧಾನಿ ಅವರಲ್ಲಿ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ವಾಜಪೇಯಿ ಅವರು ‘ಸೋನಿಯಾ ಜಿ ನಾನು ಸುರಕ್ಷಿತವಾಗಿದ್ದೇನೆ. ನೀವು ಸಂಸತ್ತಿನ ಕಟ್ಟಡದಲ್ಲಿ ಇರಬಹುದೆಂದು ನನಗೆ ಚಿಂತೆಯಾಗಿತ್ತು... ನಿಮ್ಮ ಬಗ್ಗೆ ಕಾಳಜಿವಹಿಸಿ’ ಎಂದು ಉತ್ತರಿಸಿದ್ದರು ಎಂಬುದಾಗಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.