ADVERTISEMENT

ಅಧ್ಯಕ್ಷನಾಗಿ ಆಯ್ಕೆಯಾದರೂ ಸೋನಿಯಾ, ರಾಹುಲ್ ಜೊತೆ ಸಮಾಲೋಚನೆ ನಡೆಸುತ್ತೇನೆ: ಖರ್ಗೆ

ಪಿಟಿಐ
Published 12 ಅಕ್ಟೋಬರ್ 2022, 13:44 IST
Last Updated 12 ಅಕ್ಟೋಬರ್ 2022, 13:44 IST
   

ಭೋಪಾಲ್: ಬಿಜೆಪಿ ವಿರುದ್ಧ ಹೋರಾಡುವುದು ನಮ್ಮ ಪಕ್ಷದ ಮುಂದಿರುವ ಪ್ರಮುಖ ಸವಾಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕೇಸರಿ ಪಕ್ಷವು ದೇಶದ ಸಂವಿಧಾನವನ್ನು ನಾಶ ಮಾಡುತ್ತಿದೆ. ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ದೂರಿದರು.

ಸಾಮೂಹಿಕ ನಾಯಕತ್ವದ ಮೇಲೆ ನಾನು ನಂಬಿಕೆ ಇಟ್ಟಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ಆಯ್ಕೆಯಾದರೆ, ಸಂಘಟನೆ ವಿಚಾರದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಜೊತೆ ಸಮಾಲೋಚನೆ ನಡೆಸುತ್ತೇನೆ ಎಂದು ಖರ್ಗೆ ಹೇಳಿದ್ದಾರೆ

ನೀವು ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರೆ ಪ್ರಧಾನಿ ಅಭ್ಯರ್ಥಿ ಯಾರು ಎಂಬ ವರದಿಗಾರರ ಪ್ರಶ್ನೆಗೆ, ನಮ್ಮ ರಾಜ್ಯ ಕರ್ನಾಟಕದಲ್ಲಿ ಒಂದು ಗಾದೆ ಮಾತು ಅತ್ಯಂತ ಜನಪ್ರಿಯವಾಗಿದೆ. ಅದೇನೆಂದರೆ, ನೀವು ಒಂದು ಹಬ್ಬದಲ್ಲಿ ಉಳಿದುಕೊಂಡರೆ, ಮತ್ತೊಂದರಲ್ಲಿ ನೃತ್ಯ ಮಾಡಬಹುದು ಎಂದು ಹೇಳಿದರು. ನಾನು ಇಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ವಿಚಾರವಾಗಿ ಆಗಮಿಸಿದ್ದೇನೆ. ಈ ಎಲ್ಲ ವಿಷಯಗಳ ಬಗ್ಗೆ ನಾವು ನಂತರ ಯೋಚಿಸುತ್ತೇವೆ ಎಂದು ಹೇಳಿದರು.

ADVERTISEMENT

ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ದೃಷ್ಟಿಯಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಅವರು ಹೇಳಿದ್ದಾರೆ. ಗಾಂಧಿ ಕುಟುಂಬದಿಂದ ಯಾರೊಬ್ಬರೂ ಸ್ಪರ್ಧೆಗೆ ಮುಂದೆ ಬಾರದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧಿಸಿದ್ದೇನೆ ಎಂದರು.

ಕಾಂಗ್ರೆಸ್ ಆಡಳಿತವಿದ್ದ ದೇಶದ ಅರ್ಧ ಡಜನ್ ರಾಜ್ಯಗಳಲ್ಲಿ ನಮ್ಮ ಶಾಸಕರನ್ನು ಸೆಳೆದು, ಸರ್ಕಾರಗಳನ್ನು ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಏರಿದೆ ಎಂದು ಖರ್ಗೆ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.