ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಗೆ ಮುಂದಿನ ವರ್ಷ ನಡೆಯುವ ಚುನಾವಣೆಯು ರಾಷ್ಟ್ರಪತಿ ಆಳ್ವಿಕೆಯಲ್ಲಿಯೇ ನಡೆಯಬೇಕು ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸೋಮವಾರ ಒತ್ತಾಯಿಸಿದ್ದಾರೆ.
ಮುರ್ಶಿದಾಬಾದ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರವು, ಜನರಿಗೆ ರಕ್ಷಣೆ ಒದಗಿಸುವಲ್ಲಿ ಹಾಗೂ ಶಾಂತಿ ಕಾಪಾಡುವಲ್ಲಿ ರಾಜ್ಯ ಸರ್ಕಾರದ ಅಸಮರ್ಥತೆಯನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಅಧಿಕಾರಿ, 'ಯಾವೆಲ್ಲಾ ಭಾಗಗಳಲ್ಲಿ ಹಿಂದೂಗಳು ಕಡಿಮೆ ಸಂಖ್ಯೆಯಲ್ಲಿದ್ದಾರೋ, ಅಲ್ಲೆಲ್ಲಾ ಅವರನ್ನು ಮತದಾನದಲ್ಲಿ ಪಾಲ್ಗೊಳ್ಳದಂತೆ ತಡೆಯಲಾಗುತ್ತಿದೆ. ಪೊಲೀಸರು ಆಡಳಿತ ಪಕ್ಷದ ಪಡೆಯಂತೆ ವರ್ತಿಸುತ್ತಿದ್ದಾರೆ. ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳು ನಡೆಯಬೇಕಾದರೆ, ವಿಧಾನಸಭೆಯು ರಾಷ್ಟ್ರಪತಿ ಆಳ್ವಿಕೆಗೆ ಒಳಪಡಬೇಕು' ಎಂದು ಪ್ರತಿಪಾಧಿಸಿದ್ದಾರೆ.
ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಅವರು, ಇತ್ತೀಚೆಗೆ ನಡೆದ ಗಲಭೆಯ ಹಿಂದೆ ಜಿಹಾದಿ ಶಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ. 'ಇಂತಹ ಗುಂಪುಗಳಿಗೆ, ಗಲಭೆ ಸೃಷ್ಟಿಸಲು ಅವಕಾಶ ಕಲ್ಪಿಸಲಾಗಿದೆ. ಅವರನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಆದರೆ, ಸಾಮಾನ ವೇದಿಕೆ ಇರಬೇಕು. ಚುನಾವಣೆಗೂ ಮುನ್ನ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂಬ ಒತ್ತಾಯವನ್ನು ಚುನಾವಣಾ ಆಯೋಗ ಪರಿಗಣಿಸಬೇಕು' ಎಂದು ಮನವಿ ಮಾಡಿದ್ದಾರೆ.
ಹಿಂಸಾಚಾರ ಸಂತ್ರಸ್ತ ನೂರಾರು ಮಂದಿ, ಭಾಗೀರಥಿ ನದಿ ದಾಟಿ ಹೋಗಿ, ನೆರೆಯ ಮಾಲ್ದಾ ಜಿಲ್ಲೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ 2026ರ ಏಪ್ರಿಲ್–ಮೇ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.