
ಕೊಯಿಕ್ಕೋಡ್: ‘ಬೆಂಗಳೂರಿನಲ್ಲಿ ನಡೆದ ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯನ್ನು ಉತ್ತರ ಪ್ರದೇಶದ ಘಟನೆಗಳಿಗೆ ಹೋಲಿಸುವುದು ಸರಿಯಲ್ಲ’ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ರಾಷ್ಟ್ರೀಯ ಕಾರ್ಯದರ್ಶಿ ಪಿ.ಕೆ. ಕುನ್ಹಾಲಿಕುಟ್ಟಿ ಹೇಳಿದರು.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಈ ಸಂಬಂಧ ಕರ್ನಾಟಕದ ಮುಖ್ಯಮಂತ್ರಿ, ಸಚಿವರೊಂದಿಗೆ ಮಾತನಾಡಿದ್ದೇನೆ. ತೆರವು ಕಾರ್ಯಾಚರಣೆಯಿಂದಾಗಿ ಎಲ್ಲ ಸಮುದಾಯಗಳ ಜನರು ಬಾಧಿತರಾಗಿರುವುದನ್ನು ಅವರು ತಿಳಿಸಿದ್ದಾರೆ’ ಎಂದರು.
‘ಮನೆ ಕಳೆದುಕೊಂಡವರಿಗೆ ಸರ್ಕಾರ ಪುನರ್ವಸತಿ ಕಲ್ಪಿಸಲಿದೆ. ಆಕರ್ಷಕ ಪುನರ್ವಸತಿ ಪ್ಯಾಕೇಜ್‌ಗಳನ್ನು ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎನ್ನುವ ಕಾರಣಕ್ಕೆ ಈ ವಿಷಯದ ಲಾಭ ಪಡೆಯುವುದು ಅಗ್ಗದ ರಾಜಕೀಯವಾಗುತ್ತದೆ’ ಎಂದು ಹೇಳಿದರು.
ಕರ್ನಾಟಕದ ರಾಜಧಾನಿಯಲ್ಲಿ ಮುಸ್ಲಿಮರ ಮನೆಗಳನ್ನು ನೆಲಸಮಗೊಳಿಸಲಾಗಿದೆ ಎಂಬ ವರದಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ತೀವ್ರವಾಗಿ ಟೀಕಿಸಿದ್ದರು. ಈ ಕ್ರಮವು ಆಘಾತಕಾರಿ ಮತ್ತು ನೋವಿನಿಂದ ಕೂಡಿದೆ ಎಂದು ಹೇಳಿದ್ದರು.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಂಡೆ ಬಳಿ ವಸೀಮ್ ಲೇಔಟ್ ಮತ್ತು ಫಕೀರ್ ಕಾಲೊನಿಯಲ್ಲಿ 200ಕ್ಕೂ ಅಧಿಕ ಶೆಡ್‌ಗಳನ್ನು ತೆರವುಗೊಳಿಸಲಾಗಿತ್ತು.
ತ್ಯಾಜ್ಯ ಸಂಸ್ಕರಣಾ ಘಟಕಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಶೆಡ್, ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಹೀಗಾಗಿ, ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.