
ಆರೋಪಿಗಳಿಂದ ವಶಪಡಿಸಿಕೊಂಡ ಮಾದಕ ವಸ್ತು ತಯಾರಿಸುವ ಕಚ್ಛಾವಸ್ತುಗಳನ್ನು ಎನ್‌ಎಟಿಎಫ್ ಅಧಿಕಾರಿಗಳು ಪರಿಶೀಲಿಸಿದರು.
ಠಾಣೆ/ಬೆಂಗಳೂರು: ಹೊಸ ವರ್ಷಾಚರಣೆಗೆ ಭರ್ಜರಿ ತಯಾರಿ ನಡೆದಿರುವ ನಡುವೆಯೇ, ಬೆಂಗಳೂರು ಪೊಲೀಸರ ಸಹಕಾರದಲ್ಲಿ ರಾಜಧಾನಿಯಲ್ಲಿ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರದ ಮಾದಕವಸ್ತು ನಿಗ್ರಹ ಕಾರ್ಯಪಡೆ, ಭಾರಿ ಪ್ರಮಾಣದ ಡ್ರಗ್ಸ್ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿದ್ದು, ₹55.88 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದೆ.
ಮುಂಬೈನಲ್ಲಿ ಸೆರೆಸಿಕ್ಕ ಆರೋಪಿಯೊಬ್ಬ ಕೊಟ್ಟ ಸುಳಿವು ಆಧರಿಸಿ, ಮೈಸೂರಿನಲ್ಲಿ ದಾಳಿ ನಡೆಸಿದ್ದ ಮಹಾರಾಷ್ಟ್ರದ ಮಾದಕವಸ್ತು ನಿಗ್ರಹ ಕಾರ್ಯಪಡೆ (ಎಎನ್‌ಟಿಎಫ್) ₹250 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿತ್ತು. ಇದು ಇಡೀ ರಾಜ್ಯವನ್ನು ದಂಗು ಬಡಿಸಿತ್ತು. ಈಗ ಬೆಂಗಳೂರಿನಲ್ಲಿಯೂ ಮಾದಕವಸ್ತು ಜಾಲವನ್ನು ಎಎನ್‌ಟಿಎಫ್ ಭೇದಿಸಿದ್ದು, ರಾಜ್ಯದಾದ್ಯಂತ ಮಾದಕ ವಸ್ತು ತಯಾರಿ, ಮಾರಾಟದ ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಸಂಶಯ ಮೂಡಿಸಿದೆ.
ಬೆಂಗಳೂರು ಪೊಲೀಸರ ನೆರವಿನಲ್ಲಿ ಕಾರ್ಯಾಚರಣೆ ನಡೆಸಿದ ಎಎನ್‌ಟಿಎಫ್, ನಗರದಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಮೆಫೆಡ್ರೋನ್ ತಯಾರಿಸುವ ಮೂರು ಕಾರ್ಖಾನೆಗಳನ್ನು ಧ್ವಂಸಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಈ ವರೆಗೆ ನಾಲ್ವರನ್ನು ಬಂಧಿಸಲಾಗಿದ್ದು, ಇಬ್ಬರು ಶಂಕಿತರ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ.
ಬೆಂಗಳೂರು ಉತ್ತರ ಜಿಲ್ಲೆಯ ಬಾಗಲೂರಿನ ಸ್ಪಂದನಾ ಲೇಔಟ್ ಕಾಲೋನಿ, ಕೊತ್ತನೂರಿನ ಎನ್.ಜಿ.ಗೊಲ್ಲಹಳ್ಳಿ ಪ್ರದೇಶ ಹಾಗೂ ಅವಳಹಳ್ಳಿ ಠಾಣಾ ವ್ಯಾಪ್ತಿಯ ಯರಪ್ಪನಹಳ್ಳಿಯಲ್ಲಿ ದಾಳಿ ನಡೆಸಿ, ₹55.88 ಕೋಟಿ ಮೌಲ್ಯದ ಮಾದಕ ವಸ್ತು ತಯಾರಿಸುವ ಕಚ್ಛಾ ವಸ್ತುಗಳು, ರಾಸಾಯನಿಕ, ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿಸಿರುವುದಾಗಿ ಎನ್‌ಎಟಿಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಡ್ರಗ್ಸ್ ಸಾಗಣೆ ಮತ್ತು ಮಾರಾಟ ವಿರುದ್ಧ ರಾಜ್ಯವ್ಯಾಪಿ ಕಾರ್ಯಾಚರಣೆ ಆರಂಭಿಸಿದ್ದ ಎಎನ್‌ಟಿಎಫ್, ಡಿಸೆಂಬರ್ 21ರಂದು ಆರೋಪಿ ಅಬ್ದುಲ್ ಖಾದರ್ ರಶೀದ್ ಅವರನ್ನು ಬಂಧಿಸಿ, ₹1.48 ಕೋಟಿ ಮೌಲ್ಯದ ಮೆಫೆಡ್ರೋನ್ ವಶಪಡಿಸಿಕೊಂಡಿತ್ತು. ಆತ ನೀಡಿದ ಮಾಹಿತಿ ಆಧರಿಸಿ ಬೆಳಗಾವಿ ನಿವಾಸಿ ಪ್ರಶಾಂತ ಯಲ್ಲಪ್ಪ ಪಾಟೀಲ ಅವರನಮ್ನ ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿತ್ತು. ಆತ ನೀಡಿದ ಮಾಹಿತಿ ಆಧರಿಸಿ, ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಿಸುವ ಮೂರು ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಯಿತು ಎಂದೂ ಪ್ರಕಟಣೆ ಹೇಳಿದೆ.
ಡ್ರಗ್ಸ್ ತಯಾರಿಸುವ ಕಾರ್ಖಾನೆಗಳ ಬಗ್ಗೆ ಸ್ಥಳೀಯ ಗಸ್ತು ಪೊಲೀಸರ ಗಮನಕ್ಕೆ ಬಾರದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಾಗಲೂರು, ಕೊತ್ತನೂರು ಮತ್ತು ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಸತಿ ಪ್ರದೇಶಗಳಲ್ಲಿ ಹಲವು ತಿಂಗಳಿನಿಂದ ಈ ಘಟಕಗಳು ಕಾರ್ಯನಿರ್ವಹಿಸುತ್ತಿರುವುದನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿಗಳು ಘಟಕ ಆರಂಭಿಸಲು ನಕಲಿ ದಾಖಲೆಗಳನ್ನು ನೀಡಿ ನೋಂದಾಯಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಇದೇ ಕಾರಣಕ್ಕೆ ಪತ್ತೆ ಹಚ್ಚುವುದು ಕಷ್ಟವಾಗಿದೆ. ಈ ಬಗ್ಗೆ ಜಂಟಿ ತನಿಖೆ ನಡೆಸಲಾಗುವುದು ಎಂದು ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಎಎನ್‌ಟಿಎಫ್‌ನ ತಂಡಗಳು ಕಾರ್ಯಾಚರಣೆ ನಡೆಸಿ, ಇತ್ತೀಚೆಗೆ ರಾಜಸ್ಥಾನ ನಿವಾಸಿಗಳಾದ ಸೂರಜ್ ರಮೇಶ್ ಯಾದವ್ ಹಾಗೂ ಮಲ್ಕನ್ ರಾಮಲಾಲ್ ಬಿಷ್ಣೋಯಿ ಅವರನ್ನು ಬಂಧಿಸಿದ್ದವು. ಇವರು ಬೆಂಗಳೂರಿನಲ್ಲಿ ಚಟುವಟಿಕೆ ನಡೆಸುತ್ತಿದ್ದುದು ತನಿಖೆಯಿಂದ ಗೊತ್ತಾಯಿತು’ ಎಂದು ಎಎನ್‌ಟಿಎಫ್ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.
‘ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಬೆಂಗಳೂರಿನಲ್ಲಿ ಮೂರು ತಯಾರಿಕಾ ಘಟಕಗಳು ಇರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಬಳಿಕ ಈ ಘಟಕಗಳ ಮೇಲೆ ದಾಳಿ ನಡೆಸಿ, ಘನ ಮತ್ತು ದ್ರವ ರೂಪದಲ್ಲಿದ್ದ ಒಟ್ಟು 21.4 ಕೆ.ಜಿ ಮೆಫೆಡ್ರೋನ್ ಜಪ್ತಿ ಮಾಡಲಾಗಿದೆ. ಈ ಡ್ರಗ್ಸ್ ತಯಾರಿಸಲು ಬಳಸುತ್ತಿದ್ದ ಯಂತ್ರೋಪಕರಣಗಳು ಹಾಗೂ ರಾಸಾಯನಿಕಗಳನ್ನು ಮುಟ್ಟುಗೋಲು ಹಾಕಿಕೊಂಡು, ಮೂರೂ ಕಾರ್ಖಾನೆಗಳನ್ನು ಧ್ವಂಸ ಮಾಡಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.
‘ಈ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತಿದ್ದ ಮೆಫೆಡ್ರೋನ್ ಅನ್ನು ಹಲವು ರಾಜ್ಯಗಳಿಗೆ ಪೂರೈಸಲಾಗುತ್ತಿತ್ತು. ಈ ಡ್ರಗ್ಸ್ ಮಾರಾಟದಿಂದ ಬಂದ ಹಣವನ್ನು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಸಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ತಿಳಿಸಿದೆ.
ಆರೋಪಿಗಳಿಂದ ವಶಪಡಿಸಿಕೊಂಡ ಮಾದಕ ವಸ್ತು ತಯಾರಿಸುವ ಕಚ್ಛಾವಸ್ತುಗಳನ್ನು ಎನ್‌ಎಟಿಎಫ್ ಅಧಿಕಾರಿಗಳು ಪರಿಶೀಲಿಸಿದರು.
ಮೂರು ವರ್ಷದಲ್ಲಿ ಡ್ರಗ್ಸ್ ನಾಶಪಡಿಸಿದ ವಿವರ* ವರ್ಷ; ಡ್ರಗ್ಸ್ (ಕೆ.ಜಿ.); ಮೌಲ್ಯ (ಕೋಟಿಗಳಲ್ಲಿ) 2023; 12,340; ₹18.07 2024; 7,016; ₹16.27 2025; 10,084; ₹104.17 *ವಿಧಾನಸಭೆಗೆ ಗೃಹ ಸಚಿವ ಪರಮೇಶ್ವರ ನೀಡಿದ ಮಾಹಿತಿ
ಡ್ರಗ್ಸ್ ದಂಧೆಯ ವಿರುದ್ಧ ಅಕ್ಟೋಬರ್ ನವೆಂಬರ್ ತಿಂಗಳಿಂದ ಪೊಲೀಸರು ರಾಜ್ಯದಾದ್ಯಂತ ಹೆಚ್ಚಿನ ಕಾರ್ಯಾಚರಣೆ ಕೈಗೊಂಡಿದ್ದಾರೆ. ಪೊಲೀಸರು ಈ ವರೆಗೆ ₹165 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆಜಿ. ಪರಮೇಶ್ವರ ಗೃಹ ಸಚಿವ
ಶೌರ್ಯ ಸಾಹಸ ದಕ್ಷತೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರದ ಅಸಮರ್ಥತೆಯಿಂದ ನಿತ್ರಾಣವಾಗಿದೆ. ಡ್ರಗ್ಸ್ ದಂಧೆ ನಡೆಯುತ್ತಿದ್ದರೂ ಪೊಲೀಸರು ಏನು ಮಾಡುತ್ತಿದ್ದಾರೆಆರ್.ಅಶೋಕ ವಿರೋಧ ಪಕ್ಷದ ನಾಯಕ
ಒಳ್ಳೆಯ ಕೆಲಸಕ್ಕೆ ಪ್ರಸಿದ್ಧವಾಗಿದ್ದ ಬೆಂಗಳೂರು ಡ್ರಗ್ಸ್ ರಾಜಧಾನಿ ಆಗುತ್ತಿದೆ. ಮಹಾರಾಷ್ಟ್ರ ಪೊಲೀಸರು ಬಂದು ಇಲ್ಲಿ ಡ್ರಗ್ಸ್ ತಾಣ ಪತ್ತೆ ಹಚ್ಚುತ್ತಾರೆ ಎಂದರೆ ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗಬೇಕು. ಗೃಹ ಇಲಾಖೆ ಏನು ಮಾಡುತ್ತಿದೆ? ಪೋಲಿಸರು ನಿದ್ದೆ ಮಾಡುತ್ತಿದ್ದಾರಾ ಇಲ್ಲ ರಿಯಲ್ ಎಸ್ಟೇಟ್ ಮಾಡುತ್ತಿದ್ದರಾ?ಡಾ.ಕೆ.ಸುಧಾಕರ್ ಸಂಸದ ಚಿಕ್ಕಬಳ್ಳಾಪುರ
ಬೆಂಗಳೂರು: ಎಎನ್‌ಟಿಎಫ್ ಮತ್ತು ಬೆಂಗಳೂರು ಪೊಲೀಸರು ಜಂಟಿಯಾಗಿ ನಗರದ ಕಾರ್ಖಾನೆಯೊಂದರ ಮೇಲೆ ಶನಿವಾರ ದಾಳಿ ನಡೆಸಿ ₹1.20 ಕೋಟಿ ಮೌಲ್ಯದ ಡ್ರಗ್ಸ್ ಕಚ್ಛಾ ವಸ್ತು ಜಪ್ತಿ ಮಾಡಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು. ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಭಾನುವಾರ ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
‘ಕಾರ್ಖಾನೆಯಲ್ಲಿ ಯಾವುದೇ ಡ್ರಗ್ಸ್ ತಯಾರಿಸುತ್ತಿರಲಿಲ್ಲ. ಡ್ರಗ್ಸ್ ತಯಾರಿಕೆಯ ಕಚ್ಛಾ ವಸ್ತು ಯಂತ್ರೋಪಕರಣಗಳು ರಾಸಾಯನಿಕಗಳು ಪತ್ತೆಯಾಗಿವೆ. ದಾಳಿ ವೇಳೆ ₹55.88 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ ಎಂಬುದಾಗಿ ಎಎನ್‌ಟಿಎಫ್ ನೀಡಿರುವ ಹೇಳಿಕೆ ಸತ್ಯಕ್ಕೆ ದೂರ ಎಂದರು. ‘ಮೂರು ಕಡೆ ಡ್ರಗ್ಸ್ ಕಾರ್ಖಾನೆ ಇತ್ತು ಎಂಬುದು ಸುಳ್ಳು. ಕಾರ್ಯಾಚರಣೆ ವೇಳೆ ನಗರದ ಡಿಸಿಪಿ ಸಹ ಎಎನ್‌ಟಿಎಫ್ ಪೊಲೀಸರೊಂದಿಗೆ ಇದ್ದರು’ ಎಂದು ಅವರು ಹೇಳಿದರು.
‘ಪತ್ತೆಯಾಗಿರುವ ಡ್ರಗ್ಸ್ ರಾಸಾಯನಿಕದ ಮೌಲ್ಯ 1 ಕೆ.ಜಿ.ಗೆ 30 ಲಕ್ಷ. ಒಟ್ಟು 4 ಕೆ.ಜಿ.ಗೆ ₹1.20 ಕೋಟಿ ಆಗುತ್ತದೆ. ಮುಂಬೈನಲ್ಲಿ ಸೆರೆಸಿಕ್ಕ ಆರೋಪಿಯು ನೀಡಿದ ಸುಳಿವಿನ ಮೇರೆಗೆ ಬೆಂಗಳೂರು ನಗರ ಪೊಲೀಸ್ ಮುಂಬೈ ಪೊಲೀಸ್ ಎನ್‌ಸಿಬಿ ಸೋಕೋ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಆರೋಪಿಯು ಡ್ರಗ್ಸ್ ತಯಾರಿಸಲು ಬೇಕಾದ ಮೆಫೆಡ್ರೋನ್ ಎಂಬ ರಾಸಾಯನಿಕ ಸಂಗ್ರಹಿಸಿಟ್ಟುಕೊಂಡಿದ್ದ. ಈ ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸರಿಯಲ್ಲ ಎಂದರು.
‘ಅನೇಕ ಸಂದರ್ಭಗಳಲ್ಲಿ ಪೊಲೀಸರು ತಮ್ಮ ರಾಜ್ಯದಲ್ಲಿ ಸೆರೆಸಿಕ್ಕ ಆರೋಪಿಗಳು ನೀಡುವ ಮಾಹಿತಿ ಆಧರಿಸಿ ಬೇರೆ ರಾಜ್ಯಗಳಲ್ಲಿ ಕಾರ್ಯಾಚರಣೆ ಕೈಗೊಳ್ಳುತ್ತಾರೆ. ಈಗಾಗಲೇ ಬೇರೆ ಬೇರೆ ಪ್ರಕರಣಗಳಲ್ಲಿ ನಮ್ಮ ಪೊಲೀಸರ ನಾಲ್ಕು ತಂಡಗಳು ಬೇರೆ ರಾಜ್ಯಗಳಲ್ಲೂ ಮಾಹಿತಿ ಸಂಗ್ರಹಿಸುತ್ತಿವೆ. ಆಗ ಅಲ್ಲಿನ ಪೊಲೀಸರ ವೈಫಲ್ಯ ಎಂದು ಹೇಳಲಾಗುತ್ತದೆಯೇ’ ಎಂದು ಪ್ರಶ್ನಿಸಿದರು.
‘ಬೆಂಗಳೂರಿನಲ್ಲಿ ಮುಂದೆ ಇಂತಹ ಘಟನೆ ಆಗಬಾರದು. ಡಿಸಿಪಿ ಎಸಿಪಿ ಅಥವಾ ಸ್ಥಳೀಯ ಅಧಿಕಾರಿಗಳು ಯಾರೇ ಇರಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅಮಾನತು ಅಷ್ಟೇ ಅಲ್ಲದೇ ಬೇರೆ ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ’ ಎಂದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್ ವಂಶಿಕೃಷ್ಣ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸಭೆಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.