ADVERTISEMENT

ಪ್ರಮುಖ ಬೀದಿ: ಬೆಂಗಳೂರಿನ ಎಂ.ಜಿ. ರಸ್ತೆಗೆ ಮೊದಲ ಸ್ಥಾನ

ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ಇಂಡಿಯಾ ವರದಿ

ಪಿಟಿಐ
Published 10 ಮೇ 2023, 15:46 IST
Last Updated 10 ಮೇ 2023, 15:46 IST
ಬೆಂಗಳೂರಿನ ಎಂ.ಜಿ ರೋಡ್‌- ಸಾಂದರ್ಭಿಕ ಚಿತ್ರ
ಬೆಂಗಳೂರಿನ ಎಂ.ಜಿ ರೋಡ್‌- ಸಾಂದರ್ಭಿಕ ಚಿತ್ರ   

ನವದೆಹಲಿ: ಉತ್ತಮ ಶಾಪಿಂಗ್‌ ಅನುಭವ, ಊಟ ಮತ್ತು ಮನರಂಜನೆ ಲಭ್ಯವಿರುವ ದೇಶದ ಪ್ರಮುಖ 10 ಬೀದಿಗಳ ಪೈಕಿ ನಾಲ್ಕು ಬೀದಿಗಳು ಬೆಂಗಳೂರಿನಲ್ಲೇ ಇವೆ ಎಂದು ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ಇಂಡಿಯಾ ವರದಿ ಹೇಳಿದೆ.

ಬೆಂಗಳೂರಿನ ಎಂ.ಜಿ. ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್‌, ಬ್ರಿಗೆಡ್‌ ರಸ್ತೆ ಮತ್ತು ಚರ್ಚ್‌ ಸ್ಟ್ರೀಟ್‌ ಗ್ರಾಹಕರನ್ನು ಆಕರ್ಷಿಸುವ ಪ್ರಮುಖ 10 ಬೀದಿಗಳಲ್ಲಿ ಸ್ಥಾನ ಪಡೆದಿವೆ ಎಂದು ವರದಿಯಲ್ಲಿ ತಿಳಿಸಿದೆ. ಬೆಂಗಳೂರು, ಹೈದರಾಬಾದ್‌, ಕೋಲ್ಕತ್ತ, ಮುಂಬೈ ಸೇರಿದಂತೆ ದೇಶದ 8 ನಗರಗಳಲ್ಲಿನ ಪ್ರಮುಖವಾದ 30 ಬೀದಿಗಳಿಗೆ ಸಂಬಂಧಿಸಿದ ವರದಿಯನ್ನು ಸಂಸ್ಥೆಯು ಬುಧವಾರ ಬಿಡುಗಡೆ ಮಾಡಿದೆ.

ಆಧುನಿಕ ರಿಟೇಲ್‌ ಮಳಿಗೆಗಳು, ಉತ್ತಮ ಖರೀದಿ ಅನುಭವ, ಊಟ ಮತ್ತು ಮನರಂಜನೆಯಂತಹ ಸೌಕರ್ಯಗಳು ಇರುವ ಕಾರಣಗಳಿಂದಾಗಿ ಪ್ರಮುಖ 30 ಬೀದಿಗಳಲ್ಲಿ 7 ಬೀದಿಗಳು ಬೆಂಗಳೂರಿನಲ್ಲಿಯೇ ಇವೆ.

ADVERTISEMENT

ಪಾರ್ಕಿಂಗ್‌, ಸಾರ್ವಜನಿಕ ಸಾರಿಗೆ, ಮಳಿಗೆಗಳಲ್ಲಿ ಉತ್ಪನ್ನಗಳ ಪ್ರದರ್ಶನ (ಸ್ಟೋರ್‌ ವಿಸಿಬಿಲಿಟಿ), ಗ್ರಾಹಕರು ವೆಚ್ಚ ಮಾಡುವ ಮೊತ್ತ ಹಾಗೂ ಸರಾಸರಿ ವಹಿವಾಟಿನ ಆಧಾರದ ಮೇಲೆ ಪ್ರಮುಖ ಬೀದಿಗಳಿಗೆ ಸ್ಥಾನ ನೀಡಲಾಗಿದೆ ಎಂದು ಸಂಸ್ಥೆಯು ಹೇಳಿದೆ.

ಮೊದಲ ಸ್ಥಾನದಲ್ಲಿ ಎಂಜಿ ರಸ್ತೆ: ಪ್ರಮುಖ 30 ಬೀದಿಗಳ ಪಟ್ಟಿಯಲ್ಲಿ ಬೆಂಗಳೂರಿನ ಎಂ.ಜಿ. ರಸ್ತೆಯು ಮೊದಲ ಸ್ಥಾನ ಪಡೆದಿದೆ. ಹೈದರಾಬಾದ್‌ನ ಸೋಮಾಜಿಗುಡ ಮತ್ತು ಮುಂಬೈನ ಲಿಂಕಿಂಗ್‌ ರಸ್ತೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿವೆ ಎಂದು ನೈಟ್‌ ಫ್ರ್ಯಾಂಕ್‌ ಹೇಳಿದೆ.

ರಿಟೇಲ್‌ ವಹಿವಾಟು ಹೆಚ್ಚು ಪೈಪೋಟಿಯಿಂದ ಕೂಡಿದೆ. ಭಾರತದ ನಗರಗಳು ಹೆಚ್ಚು ಆಧುನೀಕರಣಕ್ಕೆ ತೆರೆದುಕೊಳ್ಳುತ್ತಿವೆ. ದೇಶದಲ್ಲಿ ಹಲವು ಪ್ರಮುಖ ಬೀದಿಗಳಲ್ಲಿ ಪಾರ್ಕಿಂಗ್‌, ಉತ್ಪನ್ನಗಳ ಪ್ರದರ್ಶನ ಸೇರಿದಂತೆ ಗ್ರಾಹಕರಿಗೆ ಅನುಕೂಲ ಆಗುವ ಸೌಲಭ್ಯಗಳನ್ನು ಕಲ್ಪಿಸುವುದರಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ನೈಟ್‌ ಫ್ರ್ಯಾಂಕ್‌ ಇಂಡಿಯಾದ ಅಧ್ಯಕ್ಷ ಶಿಶಿರ್‌ ಬೈಜಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.