ADVERTISEMENT

ಐಪಿಎಲ್‌ ಹೆಸರಲ್ಲಿ ಜೂಜು- ‘ಸುಪ್ರೀಂ’ ಕಳವಳ

ಪಿಟಿಐ
Published 23 ಮೇ 2025, 11:33 IST
Last Updated 23 ಮೇ 2025, 11:33 IST
   

ನವದೆಹಲಿ: ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌) ಹೆಸರಿನಲ್ಲಿ ಜನರು ಜೂಜು ಮತ್ತು ಬೆಟ್ಟಿಂಗ್‌ನಲ್ಲಿ ಹೆಚ್ಚು ತೊಡಗುತ್ತಿದ್ದು, ಇದು ಗಂಭೀರವಾದ ವಿಷಯ’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಕಳವಳ ವ್ಯಕ್ತಪಡಿಸಿತು.

‘ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್‌ಗಳಿಂದಾಗಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಕೋರಿ ಸಲ್ಲಿಸಲಾಗಿದ್ದ ಪಿ‌ಐಎಲ್‌ ವಿಚಾರಣೆ ವೇಳೆ ಪೀಠ ಈ ಮಾತು ಹೇಳಿತು.

ಅರ್ಜಿದಾರ ಕೆ.ಎ.ಪೌಲ್‌, ‘ಆನ್‌ಲೈನ್‌ನಲ್ಲಿ ಸಕ್ರಿಯವಾಗಿರುವ ಪ್ರಭಾವಿಗಳು, ನಟರು, ಕ್ರಿಕೆಟ್‌ ಪಟುಗಳು ಆ್ಯಪ್‌ಗಳ ಬಗ್ಗೆ ಪ್ರಚಾರ ಮಾಡಿ, ಬೆಟ್ಟಿಂಗ್‌ನತ್ತ ಜನರ ಸೆಳೆಯುತ್ತಿದ್ದಾರೆ’ ಎಂದು ದೂರಿದ್ದರು.

ADVERTISEMENT

ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎನ್‌.ಕೋಟೀಶ್ವರ ಸಿಂಗ್ ಅವರಿದ್ದ ಪೀಠ, ಅರ್ಜಿ ಕುರಿತು ಪ್ರತಿಕ್ರಿಯೆಯನ್ನು ದಾಖಲಿಸುವಂತೆ ಸೂಚಿಸಿ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು.

ಕಳೆದ ಒಂದೆರಡು ವರ್ಷಗಳಲ್ಲಿ ಮೃತಪಟ್ಟಿರುವ ಮಕ್ಕಳ ಪೋಷಕರ ಪ್ರತಿನಿಧಿಯಾಗಿ ಪಿಐಎಲ್‌ ಸಲ್ಲಿಸುತ್ತಿದ್ದೇನೆ. ಸಿಗರೇಟ್‌ ಪ್ಯಾಕ್‌ಗಳ ಮೇಲೆ ಅದರ ಪರಿಣಾಮ ಬಿಂಬಿಸುವ ಚಿತ್ರಗಳಿವೆ. ಬೆಟ್ಟಿಂಗ್ ಆ್ಯಪ್‌ಗಳ ಸಂಬಂಧ ಇಂತಹ ಎಚ್ಚರಿಕೆಗಳನ್ನೂ ಪ್ರಸಾರ ಮಾಡುತ್ತಿಲ್ಲ. ಮಾಜಿ ಕ್ರಿಕೆಟ್ ಆಟಗಾರರೂ ಐಪಿಎಲ್‌ ವೇಳೆ ಈ ಆ್ಯಪ್‌ಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ’ ಎಂದು ಅರ್ಜಿದಾರ ಉಲ್ಲೇಖಿಸಿದ್ದಾರೆ.

ತೆಲಂಗಾಣದಲ್ಲೇ 1,023 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಿವುಡ್, ಟಾಲಿವುಡ್‌ನ 25ಕ್ಕೂ ಹೆಚ್ಚು ನಟರು, ಪ್ರಭಾವಿಗಳು ಈ ಅಮಾಯಕರ ಬದುಕಿನಲ್ಲಿ ಆಟವಾಡಿದ್ದಾರೆ.  ಮೂಲಭೂತ ಹಕ್ಕಿನ ಉಲ್ಲಂಘನೆ ಸಂಬಂಧ ಈ ನಟರು, ಪ್ರಭಾವಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದಿದ್ದಾರೆ.

ಈ ಸಂಬಂಧ ತನ್ನ ಅಸಹಾಯಕತೆ ವ್ಯಕ್ತಪಡಿಸಿದ ಪೀಠವು, ‘ಇದು, ಸಮಾಜವೇ ಹಾದಿತಪ್ಪಿರುವ ಪರಿಸ್ಥಿತಿ. ಕೊಲೆ ಮಾಡದಂತೆ ಜನರನ್ನು ಹೇಗೆ ತಡೆಯಲು ಸಾಧ್ಯವಿಲ್ಲವೋ, ಹಾಗೆಯೇ ಕಾನೂನು ರಚನೆಯಿಂದ ಇದನ್ನೂ ತಡೆಯಲಾಗದು’ ಎಂದು ಪೀಠವು ವಿಚಾರಣೆ ವೇಳೆ ಪ್ರತಿಕ್ರಿಯಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.