
ಮುಂಬೈ: ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಪದ್ಮ ಭೂಷಣ ಪುರಸ್ಕಾರ ಘೋಷಣೆ ಮಾಡಿದ ಕೇಂದ್ರ ಸರ್ಕಾರದ ನಡೆಯು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ.
‘ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಕಗ್ಗೊಲೆ ಮಾಡಿದವರಿಗೆ ಪುರಸ್ಕಾರ ಘೋಷಣೆ ಮಾಡಲಾಗಿದೆ ಎಂದು’ ಶಿವಸೇನಾ (ಯುಟಿಬಿ) ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
‘ಕೋಶಿಯಾರಿ ಸಾಂವಿಧಾನಿಕ ಕಚೇರಿಗೆ ಅವಮಾನ ಎಸಗಿ, ಮಹಾರಾಷ್ಟ್ರದ ಜನರ ಭಾನನೆಗಳಿಗೆ ನೋವುಂಟು ಮಾಡಿದ್ದಾರೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಕ್ಪಾಲ್ ಟೀಕಿಸಿದ್ದಾರೆ.
2019–2023ರ ಅವಧಿಯಲ್ಲಿ ಕೋಶಿಯಾರಿ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು.
‘ಛತ್ರಪತಿ ಶಿವಾಜಿ ಮಹಾರಾಜ್ ಮಹಾತ್ಮ ಫುಲೆ ಹಾಗೂ ಸಾವಿತ್ರಿ ಫುಲೆಯವರನ್ನು ಅವಮಾನಿಸಿದ ಕೋಶಿಯಾರಿಗೆ ಪದ್ಮಭೂಷಣ ನೀಡಿದ್ದನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹಾಗೂ ಉಪಮುಖ್ಯಮಂತ್ರಿಗಳಾದ ಅಜಿತ್ ಪವಾರ್, ಏಕನಾಥೆ ಶಿಂದೆ ಖಂಡಿಸಬೇಕು’ ಎಂದು ವರದಿಗಾರರೊಂದಿಗೆ ಮಾತನಾಡುವಾಗ ಹೇಳಿದ್ದಾರೆ.
‘ಅವರು ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಕಗ್ಗೊಲೆ ಮಾಡಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಉರುಳಿಸಿದ್ದರು. ಅಧಿಕಾರದಲ್ಲಿದ್ದಾಗ ಕಾನೂನು ಬಾಹಿರವಾಗಿ ನಡೆದುಕೊಂಡರು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ ’ ಎಂದು ಅವರು ಹೇಳಿದ್ದಾರೆ.
‘ಉದ್ಧವ್ ಠಾಕ್ರೆ ನೇತೃತ್ವದ ಬಹುಮತದ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಅವರು ಪ್ರಯತ್ನಿಸಿದ್ದರು. ಅವರ ಅಧಿಕಾರವಧಿಯಲ್ಲಿ ಹಲವು ವಿವಾದಗಳು ಉಂಟಾಗಿದ್ದವು. ಸರ್ಕಾರದ ಶಿಫಾರಸ್ಸಿನ ಹೊರತಾಗಿಯೂ ಖಾಲಿಯಿದ್ದ 12 ವಿಧಾನ ಪರಿಷತ್ ಸ್ಥಾನಗಳನ್ನು ಅವರ ಭರ್ತಿ ಮಾಡಲಿಲ್ಲ ಎಂದು ಉದ್ಧವ್ ಹೇಳಿದ್ದರು’ ಎಂದು ರಾವುತ್ ಹೇಳಿದ್ದಾರೆ.
ಮುಂಬೈನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆ ಬಳಿಕ ಮಾತನಾಡಿದ ಸಕ್ಪಾಲ್, ‘ಕೋಶಿಯಾರಿ ಅವರಿಗೆ ನೀಡಿದ ಕಾರಣಕ್ಕಾಗಿ ಪುಣೆ ಮೂಲಕ ಸಾಮಾಜಿಕ ಸಂಸ್ಥೆಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದೆ. ಕೋಶಿಯಾರಿ ಸಾಂವಿಧಾನಿಕ ಕಚೇರಿಗೆ ಅವಮಾನ ಎಸಗಿದ್ದರು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.