ADVERTISEMENT

ಕೋವ್ಯಾಕ್ಸಿನ್: 14 ರಾಜ್ಯಗಳಿಗೆ ಲಸಿಕೆಯ ನೇರ ಪೂರೈಕೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಮೇ 2021, 10:23 IST
Last Updated 10 ಮೇ 2021, 10:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತ್ ಬಯೋಟೆಕ್ ದೇಶದ 14 ರಾಜ್ಯಗಳಿಗೆ 'ಕೋವ್ಯಾಕ್ಸಿನ್' ಕೋವಿಡ್-19 ಲಸಿಕೆಯ ನೇರ ಪೂರೈಕೆಯನ್ನು ಆರಂಭಿಸಿದೆ. ಮೇ 1ರಿಂದ ಅನ್ವಯವಾಗುವಂತೆ ಲಸಿಕೆ ಪೂರೈಕೆಯಾಗಲಿದೆ ಎಂದು ಕಂಪನಿಯ ಜಂಟಿ‌ ನಿರ್ವಹಣಾ ನಿರ್ದೇಶಕಿ ಸುಚಿತ್ರಾ ಎಲ್ಲಾ ಹೇಳಿದ್ದಾರೆ.

ಕೇಂದ್ರ ಸರ್ಕಾರ ನಿಗದಿಪಡಿಸಿರುವ ಲಸಿಕೆ ಹಂಚಿಕೆಯ ಆಧಾರದ ಮೇಲೆ 'ಕೋವ್ಯಾಕ್ಸಿನ್' ಲಸಿಕೆಯನ್ನು ಮಹಾರಾಷ್ಟ್ರ ಮತ್ತು ದೆಹಲಿ ಸೇರಿದಂತೆ 14 ರಾಜ್ಯಗಳಿಗೆ ಪೂರೈಸಲಾಗುತ್ತಿದೆ.

'ಕೇಂದ್ರ ಸರ್ಕಾರ ನಿಗದಿ ಮಾಡಿರುವಂತೆ ರಾಜ್ಯ ಸರ್ಕಾರಗಳಿಗೆ ಮೇ 1ರಿಂದ ಕೋವ್ಯಾಕ್ಸಿನ್ ಲಸಿಕೆಯನ್ನು ನೇರವಾಗಿ ಪೂರೈಸಲಾಗುತ್ತಿದೆ. ಇತರೆ ರಾಜ್ಯಗಳಿಂದಲೂ ಬೇಡಿಕೆ ಬಂದಿದ್ದು, ಲಸಿಕೆ ಸಂಗ್ರಹದ ಆಧಾರದ ಮೇಲೆ ವಿತರಣೆ ಪ್ರಕ್ರಿಯೆ ನಡೆಸಲಾಗುತ್ತದೆ' ಎಂದು ಸುಚಿತ್ರಾ ಎಲ್ಲಾ ಟ್ವೀಟಿಸಿದ್ದಾರೆ.

ADVERTISEMENT

ಪ್ರಸ್ತುತ ಕರ್ನಾಟಕಕ್ಕೆ ಲಸಿಕೆಯ ನೇರ ಪೂರೈಕೆ ಲಭ್ಯವಾಗಿಲ್ಲ. ಆಂಧ್ರ ಪ್ರದೇಶ, ಅಸ್ಸಾಂ, ಛತ್ತೀಸ್ ಗಢ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯ ಪ್ರದೇಶ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳಕ್ಕೆ ಲಸಿಕೆ ಪೂರೈಕೆ ಮಾಡಲಾಗುತ್ತಿದೆ.

ಏಪ್ರಿಲ್ 29ರಂದು ರಾಜ್ಯಗಳಿಗೆ ಪ್ರತಿ ಡೋಸ್ ಕೋವ್ಯಾಕ್ಸಿನ್ ಲಸಿಕೆಗೆ ₹ 400 ನಿಗದಿ ಪಡಿಸಲಾಗಿದೆ‌. ಅದಕ್ಕೂ ಮುನ್ನ ಪ್ರತಿ ಡೋಸ್ ಗೆ ₹ 600 ನಿಗದಿ ಮಾಡಲಾಗಿತ್ತು.

ಕಂಪನಿಯು ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್ ಲಸಿಕೆಗೆ ₹ 150 ದರದಲ್ಲಿ ಪೂರೈಕೆ ಮಾಡುತ್ತಿದೆ. ಮೇ 1ರಿಂದ ದೇಶದಾದ್ಯಂತ 18ರಿಂದ 44 ವರ್ಷ ವಯೋಮಾನದವರಿಗೂ ಲಸಿಕೆ ಹಾಕುವ ಕಾರ್ಯಕ್ರಮ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.