ADVERTISEMENT

ಪಾಕ್ ರೂಪಿಸಿದ ಕರ್ತಾರಪುರ ವಿಡಿಯೊದಲ್ಲಿ ಪ್ರತ್ಯೇಕತಾವಾದಿಗಳ ಚಿತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ನವೆಂಬರ್ 2019, 8:40 IST
Last Updated 6 ನವೆಂಬರ್ 2019, 8:40 IST
   

ಪಾಕಿಸ್ತಾನ ಸರ್ಕಾರ ಕರ್ತಾರಪುರ ಕಾರಿಡಾರ್‌ ಉದ್ಘಾಟನೆ ಸಂಬಂಧ ಬಿಡುಗಡೆಗೊಳಿಸಿರುವ ವಿಡಿಯೊ ತುಣುಕೊಂದುತೀವ್ರ ವಿವಾದಕ್ಕೆ ಗ್ರಾಸವಾಗಿದೆ. ಪಾಕಿಸ್ತಾನ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಅಧಿಕೃತ ಟ್ವಿಟರ್‌ ಅಕೌಂಟ್‌ನಲ್ಲಿ ಪ್ರಕಟಿಸಿರುವ ವಿಡಿಯೊ ತುಣುಕಿನಲ್ಲಿ ಖಲಿಸ್ತಾನ ಪ್ರತ್ಯೇಕತಾವಾದಿಗಳಾದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ,ಮೇಜರ್‌ ಜನರಲ್ ಶಬೇಗ್‌ ಸಿಂಗ್‌ ಮತ್ತು ಅಮ್ರಿಕ್‌ ಸಿಂಗ್‌ ಖಾಲ್ಸಾ ಅವರ ಭಾವಚಿತ್ರ ಹೊಂದಿರುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.

ಆ ಮೂವರು 1984 ­ರಲ್ಲಿ ಅಮೃತಸರದ ಸ್ವರ್ಣ ಮಂದಿರ ಮೇಲೆ ಭಾರತೀಯ ಸೇನೆ ನಡೆಸಿದ್ದ ದಾಳಿಯಲ್ಲಿ ಹತರಾದ ಭಯೋತ್ಪಾದರು. ಈಗ ಪಾಕಿಸ್ತಾನವು ಅವರ ಭಾವಚಿತ್ರವಿರುವ ಪೋಸ್ಟರ್ ಕಾಣಿಸುವ ವಿಡಿಯೊ ಪ್ರಕಟಿಸುವುದರ ಮೂಲಕ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಪಾಕಿಸ್ತಾನದಲ್ಲಿರುವ ಕರ್ತಾರಪುರದ ಸಾಹಿಬ್‌ ಗುರುದ್ವಾರ ಸಿಖ್ಸಮುದಾಯಕ್ಕೆ ಪವಿತ್ರ ಸ್ಥಳವಾಗಿದ್ದು, ಭಾರತ ಗಡಿಗೆ ಕೇವಲ ಮೂರು ಕಿ.ಮೀ ಅಂತರದಲ್ಲಿದೆ. ಭಾರತ–ಪಾಕಿಸ್ತಾನ ಬಾಂಧವ್ಯ ವೃದ್ಧಿಗೆ ಮುನ್ನುಡಿ ಬರೆಯುವ ನಿಟ್ಟಿನಲ್ಲಿ ಎರಡು ದೇಶಗಳು ಕರ್ತಾರಪುರ ಕಾರಿಡಾರ್‌ಗೆ ಕಳೆದ ವರ್ಷ ಅಡಿಗಲ್ಲು ಹಾಕಿದ್ದವು.

ADVERTISEMENT

ಈಗ ಕಾರಿಡಾರ್‌ ಯೋಜನೆ ಪೂರ್ಣಗೊಂಡಿದ್ದು, ಸಿಖ್ಧರ್ಮಗುರು ಗುರುನಾನಕ್‌ರ 550 ವರ್ಷದ ಜಯಂತಿ ನಿಮಿತ್ತ, ಇದೇ ನ 9 ರಂದು ಉದ್ಘಾಟನೆಯಾಗಲಿದೆ. ಪಾಸ್‌ಪೋರ್ಟ್‌ ಹೊಂದಿರುವ ಭಾರತೀಯರು ವೀಸಾ ಪಡೆಯದೇಕರ್ತಾರಪುರಕ್ಕೆ ಭೇಟಿ ನೀಡಬಹುದಾಗಿದೆ.

ಆ ಸಂಬಂಧ ಸಿಖ್ಮತ್ತು ಮುಸ್ಲಿಂ ಸಮುದಾಯದ ಬಾಂಧವ್ಯ ಬೆಸೆಯುವ ವಿಡಿಯೊ ತುನುಕುಗಳನ್ನು ಪಾಕಿಸ್ತಾನ ಸರ್ಕಾರಪ್ರಕಟಿಸಿದೆ.ಸಿಖ್‌ಪ್ರತ್ಯೇಕವಾದಿಗಳ ಭಾವಚಿತ್ರದ ಪೋಸ್ಟರ್‌ ಪ್ರಕಟಿಸಿರುವ ಪಾಕಿಸ್ತಾನದ ನಡೆಯ ವಿರುದ್ಧ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು, ‘ಪಾಕಿಸ್ತಾನವು ರಹಸ್ಯ ಕಾರ್ಯಸೂಚಿ ಹೊಂದಿದೆ ಎಂಬುದರ ಬಗ್ಗೆ ನಾನು ಈ ಮುಂಚಿನಿಂದಲೂ ಎಚ್ಚರಿಕೆ ನೀಡುತ್ತಲೇ ಬಂದಿದ್ದೇನೆ.’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.