ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಆರು ಅಭ್ಯರ್ಥಿಗಳನ್ನೊಳಗೊಂಡ ಮತ್ತೊಂದು ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಸೋಮವಾರ ಬಿಡುಗಡೆ ಮಾಡಿದೆ. ಇದರೊಂದಿಗೆ, ಒಟ್ಟು 60 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದಂತಾಗಿದೆ.
ವಾಲ್ಮಿಕಿ ನಗರ ಕ್ಷೇತ್ರದಿಂದ ಸುರೇಂದ್ರ ಪ್ರಸಾದ್ ಕುಶ್ವಾಹ, ಅರಾರಿಯಾದಿಂದ ಎ. ರೆಹಮಾನ್, ಅಮೌರ್‌ನಿಂದ ಜಲೀಲ್ ಮಸ್ತಾನ್, ಬರಾರಿಯಿಂದ ತೌಖಿರ್ ಅಲಂ, ಕಹಲ್ಗಾನ್‌ನಿಂದ ಪ್ರವೀಣ್ ಸಿಂಗ್ ಕುಶ್ವಾಹಾ ಹಾಗೂ ಸಿಕಂದರ್ (ಎಸ್‌ಸಿ) ಕ್ಷೇತ್ರದಿಂದ ವಿನೋದ್ ಚೌಧರಿ ಕಣಕ್ಕಿಳಿಯಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೇ ದಿನ. ಹೀಗಿದ್ದರೂ, 'ಇಂಡಿಯಾ' ಬಣದಲ್ಲಿರುವ ಪಕ್ಷಗಳ (ಕಾಂಗ್ರೆಸ್, ಆರ್‌ಜೆಡಿ) ಸೀಟಿಗಾಗಿನ ಕಿತ್ತಾಟ ಮುಗಿದಿಲ್ಲ.
ಮೊದಲ ಹಂತದ ಕ್ಷೇತ್ರಗಳ ಪೈಕಿ 10 ಕಡೆ ಪರಸ್ಪರ ಸ್ಪರ್ಧೆಗೆ ಇಳಿದಿವೆ. ಈ ಸಂಖ್ಯೆ ಎರಡನೇ ಹಂತದಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ಪಕ್ಷಗಳು ಟಿಕೆಟ್ ಮಾರಾಟಕ್ಕಿಟ್ಟಿವೆ ಎಂದು ಅತೃಪ್ತ ಆಕಾಂಕ್ಷಿಗಳು ಆರೋಪಿಸುತ್ತಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಿಗದಿಯಾಗಿದೆ. 121 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನವೆಂಬರ್ 6ರಂದು, 122 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ನವೆಂಬರ್ 11ರಂದು ಮತದಾನವಾಗಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.