
ಪಟ್ನಾ: ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ
(ಪಿಟಿಐ ಚಿತ್ರ)
ಪಟ್ನಾ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ ‘ಮತದಾರರ ಅಧಿಕಾರ ಯಾತ್ರೆ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರು ಪಟ್ನಾದಲ್ಲಿ ಶುಕ್ರವಾರ ಜಟಾಪಟಿ ನಡೆಸಿದ್ದಾರೆ.
ಬಿಹಾರದ ಸಚಿವರಾದ ನಿತಿನ್ ನವೀನ್, ಸಂಜಯ್ ಸರಾವಗಿ ಹಾಗೂ ಶಾಸಕ ಸಂಜೀವ್ ಚೌರಾಸಿಯಾ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿ ‘ಸದಾಕತ್ ಆಶ್ರಮ’ಕ್ಕೆ ಮುತ್ತಿಗೆ ಹಾಕಿದ್ದಾರೆ. ಪ್ರಧಾನಿ ಅವರನ್ನು ದರ್ಭಂಗಾದಲ್ಲಿ ಬುಧವಾರ ನಿಂದಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ರಾಹುಲ್ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಕಾಂಗ್ರೆಸ್ ಕಾರ್ಯಕರ್ತರು ಸದಾಕತ್ ಆಶ್ರಮದ ಗೇಟ್‌ಅನ್ನು ಒಳಗಿನಿಂದ ಲಾಕ್ ಮಾಡಿದ್ದಾರೆ. ಕೆಲವರು ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ಆರೋಪಿಸಲಾಗಿದೆ. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿದೆ. ಪಕ್ಷದ ಬಾವುಟ ಕಟ್ಟಿದ್ದ ಕೋಲುಗಳನ್ನು ಹಿಡಿದು ಬಡಿದಾಡಿಕೊಂಡರು. ಇದರ ಫೋಟೊ ಹಾಗೂ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಅಲ್ಲಿಂದ ತೆರಳುವಂತೆ ಬಿಜೆಪಿ ಕಾರ್ಯಕರ್ತರನ್ನು ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾದರು.
‘ಇದು ಒಂದು ಸಣ್ಣ ಘರ್ಷಣೆಯಾಗಿದ್ದು, ಎರಡೂ ಕಡೆಯಲ್ಲಿ ಕಾರ್ಯಕರ್ತರು ಗಾಯಗೊಂಡಿರುವ ಬಗ್ಗೆ ನಮಗೆ ದೂರುಗಳು ಬಂದಿವೆ. ಇಡೀ ಘಟನೆಯ ಸಮಗ್ರ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪಟ್ನಾ ಎಸ್‌ಪಿ (ಕೇಂದ್ರ) ದೀಕ್ಷಾ ತಿಳಿಸಿದರು.
ಬಿಜೆಪಿ ‘ಗೂಂಡಾಗಿರಿ’ ನಡೆಸುತ್ತಿದೆ ಎಂದು ಆರೋಪಿಸಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು ಸದಾಕತ್ ಆಶ್ರಮದ ಹೊರಗೆ ಕೆಲಹೊತ್ತು ಧರಣಿ ಕುಳಿತರು.
‘ಪ್ರಧಾನಿ ಮೋದಿಯವರಿಗೆ ಆಗಿರುವ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಮತ್ತು ಅವರ ಬೆಂಬಲಿಗರು ರಾಷ್ಟ್ರದ ಕ್ಷಮೆಯಾಚಿಸಬೇಕು’ ಎಂದು ನಿತಿನ್ ನವೀನ್ ಆಗ್ರಹಿಸಿದರು.
ಖಂಡನೆ: ಸದಾಕತ್ ಆಶ್ರಮಕ್ಕೆ ಬಿಜೆಪಿ ಮುತ್ತಿಗೆ ಹಾಕಿದ ಘಟನೆಯನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ‘ಯಾರಾದರೂ ಪ್ರಧಾನಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದರೆ ಅವರು ಖಂಡನೆಗೆ ಅರ್ಹರು. ಆದರೆ, ಈ ಘಟನೆಯನ್ನು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಜತೆ ಜೋಡಿಸುವುದು ತಪ್ಪು. ನಮ್ಮ ಪಕ್ಷದ ರಾಜ್ಯ ಪ್ರಧಾನ ಕಚೇರಿಯ ಮೇಲಿನ ದಾಳಿ ಖಂಡನೀಯ. ಬಿಹಾರ ಸರ್ಕಾರ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್ ಹೇಳಿದ್ದಾರೆ.
‘ನಾವು ಘಟನೆಯನ್ನು ತಕ್ಷಣವೇ ಖಂಡಿಸಿದ್ದೇವೆ. ಆದರೆ, ಪ್ರಧಾನಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಈಚೆಗಿನ ವರ್ಷಗಳಲ್ಲಿ ನೀಡಿದ್ದ ಅನೇಕ ಅವಹೇಳನಕಾರಿ ಹೇಳಿಕೆಗಳಿಗೆ ಬಿಜೆಪಿ ಎಂದಾದರೂ ಕ್ಷಮೆಯಾಚಿಸಿದೆಯೇ’ ಎಂದು ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಮನೋಜ್ ಝಾ ಪ್ರಶ್ನಿಸಿದ್ದಾರೆ.
ಪಟ್ನಾ: ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ
ರಾಹುಲ್ ಗಾಂಧಿ ಅವರಲ್ಲಿ ಏನಾದರೂ ಮಾನ ಮರ್ಯಾದೆ ಉಳಿದಿದ್ದರೆ ಕ್ಷಮೆಯಾಚಿಸಲಿ. ಇಡೀ ದೇಶದ ಜನರು ಅವರನ್ನು ಮತ್ತು ಅವರ ಪಕ್ಷವನ್ನು ಅಸಹ್ಯದಿಂದ ನೋಡುತ್ತಿದ್ದಾರೆಅಮಿತ್ ಶಾ ಕೇಂದ್ರ ಗೃಹ ಸಚಿವ
‘ಮತದಾರರ ಅಧಿಕಾರ ಯಾತ್ರೆ’ಗೆ ಜನರ ಅಭೂತಪೂರ್ವ ಪ್ರತಿಕ್ರಿಯೆಯಿಂದ ವಿಚಲಿತರಾಗಿರುವ ಅಮಿತ್ ಶಾ ಅವರು ರಾಹುಲ್ ಗಾಂಧಿ ಮತ್ತು ಇತರ ನಾಯಕರ ಬಗ್ಗೆ ಸುಳ್ಳು ಹರಡುತ್ತಿದ್ದಾರೆಜೈರಾಮ್ ರಮೇಶ್ ಎಐಸಿಸಿ ಪ್ರಧಾನ ಕಾರ್ಯದರ್ಶಿ
ಸತ್ಯ ಮತ್ತು ಅಹಿಂಸೆಯ ಎದುರು ಸುಳ್ಳು ಹಾಗೂ ಹಿಂಸೆಗೆ ಸ್ಥಾನವಿಲ್ಲ. ಎಷ್ಟೇ ತಡೆ ಒಡ್ಡಿದರೂ ನಾವು ಸತ್ಯ ಮತ್ತು ಸಂವಿಧಾನವನ್ನು ರಕ್ಷಿಸುವ ಕೆಲಸ ಮುಂದುವರಿಸುತ್ತೇವೆ.ಸತ್ಯಮೇವ ಜಯತೇ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ಒಬ್ಬನ ಬಂಧನ
ಪ್ರಧಾನಿ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಿಹಾರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತನನ್ನು ದರ್ಭಂಗಾ ಪಟ್ಟಣದ ಸಿಂಗ್ವಾರ ಪ್ರದೇಶದ ನಿವಾಸಿ ಮೊಹಮ್ಮದ್ ರಿಜ್ವಿ ರಝಾ (20) ಎಂದು ಗುರುತಿಸಲಾಗಿದೆ. ಬಿಜೆಪಿ ದರ್ಭಂಗಾ ಜಿಲ್ಲಾ ಘಟಕದ ಅಧ್ಯಕ್ಷ ಆದಿತ್ಯ ನಾರಾಯಣ ಚೌಧರಿ ನೀಡಿದ್ದ ದೂರಿನಂತೆ ರಿಜ್ವಿ ಹಾಗೂ ಇತರ ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ‘ಮತದಾರರ ಅಧಿಕಾರ ಯಾತ್ರೆ’ ಅಂಗವಾಗಿ ದರ್ಭಂಗಾದಲ್ಲಿ ಬುಧವಾರ ಕಾರ್ಯಕ್ರಮ ಆಯೋಜಿಸಿದ್ದ ವೇದಿಕೆಯಿಂದ ವ್ಯಕ್ತಿಯೊಬ್ಬ ಪ್ರಧಾನಿ ಅವರನ್ನು ಹಿಂದಿಯಲ್ಲಿ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎನ್ನಲಾದ ವಿಡಿಯೊ ತುಣುಕು ಹರಿದಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.