ಪಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನೊಳಗೊಂಡ ‘ಮಹಾಘಟಬಂಧನ್’ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲು ಅಸಾದುದ್ಧೀನ್ ಓವೈಸಿ ಅವರ ಎಐಎಂಐಎಂ ಪಕ್ಷವು ಮುಂದಾಗಿದೆ.
ಎಐಎಂಐಎಂನ ಬಿಹಾರ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಪಕ್ಷದ ಏಕೈಕ ಶಾಸಕ ಅಖ್ತರುಲ್ ಇಮಾನ್ ಅವರು ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಅವರಿಗೆ ಪತ್ರ ಬರೆದಿದ್ದು, ಮೈತ್ರಿಕೂಟಕ್ಕೆ ಸೇರ್ಪಡೆಗೊಳಿಸಿಕೊಳ್ಳುವಂತೆ ಕೋರಿದ್ದಾರೆ.
‘ಮೈತ್ರಿಕೂಟಕ್ಕೆ ಎಐಎಂಐಎಂ ಸೇರ್ಪಡೆಯಿಂದ ಮತ ವಿಭಜನೆಯನ್ನು ತಡೆಯಬಹುದು’ ಎಂದು ಜುಲೈ 2ರಂದು ಬರೆದ ಪತ್ರದಲ್ಲಿ ಇಮಾನ್ ಉಲ್ಲೇಖಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಈ ಪತ್ರವನ್ನು ಹಂಚಿಕೊಳ್ಳಲಾಗಿದೆ.
2020ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಹಾಗೂ ರಾಷ್ಟ್ರೀಯ ಲೋಕ ಸಮಾಜ ಪಕ್ಷದೊಂದಿಗೆ (ಆರ್‌ಎಲ್‌ಎಸ್‌ಪಿ) ಮೈತ್ರಿ ಮಾಡಿಕೊಂಡಿದ್ದ ಎಐಎಂಐಎಂ ಐದು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ಇವರಲ್ಲಿ ನಾಲ್ವರು ಶಾಸಕರು 2022ರಲ್ಲಿ ಆರ್‌ಜೆಡಿಗೆ ಸೇರ್ಪಡೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.