ADVERTISEMENT

Bihar Election Results 2025: ಕಷ್ಟಪಟ್ಟ ನೆಲಗಳಲ್ಲಿ ಬಿಜೆಪಿ ಪ್ರಚಂಡ ದಿಗ್ವಿಜಯ

ಪಿಟಿಐ
Published 15 ನವೆಂಬರ್ 2025, 5:06 IST
Last Updated 15 ನವೆಂಬರ್ 2025, 5:06 IST
   
ಬಿಹಾರದ ರಾಜಕೀಯ ಕಣದಲ್ಲಿ ಮೋದಿ–ನಿತೀಶ್‌ ಜೋಡಿಯ ಪ್ರಭಾವಳಿಯ ನೆರವಿನಿಂದ ಮೈತ್ರಿಕೂಟವು 203 ಸ್ಥಾನಗಳನ್ನು ಗೆದ್ದು ಬೀಗಿದೆ. 2010ರಲ್ಲಿ ನಿತೀಶ್– ಬಿಜೆಪಿಯ ಸುಶೀಲ್‌ ಕುಮಾರ್ ಜೋಡಿ ಮಾಡಿದ ಸಾಧನೆಯನ್ನು ಪುನರಾವರ್ತಿಸಿದೆ. 

2017ರ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತಿಣುಕಾಡಿ ಗೆದ್ದಿತ್ತು. 2022ರ ಚುನಾವಣೆಯಲ್ಲಿ ಮೂರನೇ ಎರಡಷ್ಟು ಬಹುಮತ ಗಳಿಸಿತ್ತು. ಮಧ್ಯಪ್ರದೇಶದಲ್ಲಿ ಸತತ ನಾಲ್ಕನೆಯ ಸಲ ಗೆಲ್ಲಲು ಕಮಲ ಪಾಳಯವು 2018ರಲ್ಲಿ ಕಡೆಯ ಗಳಿಗೆಯ ತನಕ ವೀರೋಚಿತ ಹೋರಾಟ ನಡೆಸಿತ್ತು.

2023ರಲ್ಲಿ ಅಭೂತಪೂರ್ವ ಗೆಲುವು ಸಾಧಿಸಿತ್ತು. ಮಹಾರಾಷ್ಟ್ರದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಕಳಪೆ ಸಾಧನೆ ಮಾಡಿತ್ತು. ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷ ಮೈತ್ರಿಕೂಟವನ್ನು ಗುಡಿಸಿ ಹಾಕಿತ್ತು.

ಛತ್ತೀಸಗಢ ಹಾಗೂ ದೆಹಲಿ ವಿಧಾನಸಭಾ ಚುನಾವಣೆಗಳಲ್ಲೂ ಇಂತಹುದೇ ಫಲಿತಾಂಶ ಬಂದಿತ್ತು. ಇದೀಗ ಬಿಹಾರದ ಸರದಿ. 2020ರ ಚುನಾವಣೆಯಲ್ಲಿ ಗೆಲುವಿಗೆ ಏದುಸಿರು ಬಿಟ್ಟಿದ್ದ ಎನ್‌ಡಿಎ ಮೈತ್ರಿಕೂಟವು ಈ ಬಾರಿ ಪ್ರತಿಪಕ್ಷವನ್ನು ನಾಮಾವಶೇಷ ಮಾಡಿದೆ. ಅಧಿ ಕಾರಕ್ಕೇರಲು ಕಷ್ಟ ಪಟ್ಟ ನೆಲಗಳಲ್ಲಿ‍ ಮತ್ತೆ ಭರ್ಜರಿ ಗೆಲುವು ಸಾಧಿಸುವ ಹೊಸ ಹವ್ಯಾಸ ಬಿಜೆಪಿಯದ್ದು. ಬಿಜೆಪಿ ನಾಯಕರಿಗೆ ಗೆಲುವೊಂದೇ ಮಂತ್ರ. 

ADVERTISEMENT
ಬಿಜೆಪಿ ಅಧ್ಯಕ್ಷರ ನೇಮಕ ಇನ್ನು ಸಲೀಸು 
ಬಿಹಾರದಲ್ಲಿ ಗೆದ್ದು ಬೀಗಿರುವ ಬಿಜೆಪಿಯು ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕದ ಕಡೆಗೆ ಗಮನ ಹರಿಸುವುದು ಖಚಿತ. ಒಂದು ವರ್ಷದಿಂದ ನನೆಗುದಿಗೆ ಬಿದ್ದಿರುವ ಈ ಪ್ರಕ್ರಿಯೆಗೆ ವೇಗ ಸಿಗುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆ ಕಡೆಗೆ ಗಮನ ಹರಿಸುವ ಸಂಭವ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.