ADVERTISEMENT

ಬಿಹಾರ | ಚುನಾವಣಾ ಆಯೋಗ BJPಯ ಶಾಖೆಯಾಯಿತೇ..?: ರಾಹುಲ್ ಗಾಂಧಿ ಕಿಡಿ

ಪಿಟಿಐ
Published 17 ಜುಲೈ 2025, 9:44 IST
Last Updated 17 ಜುಲೈ 2025, 9:44 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ನವದೆಹಲಿ: ‘ಬಿಹಾರದ ಚುನಾವಣೆ ಹೊಸ್ತಿಲಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತಗಳನ್ನು ಕದಿಯುವಾಗ ಚುನಾವಣಾ ಆಯೋಗ ಕೈಗೆ ಸಿಕ್ಕಿಬಿದ್ದಿದ್ದು, ಆಯೋಗವು ಬಿಜೆಪಿಯ ‘ಎಲೆಕ್ಷನ್‌ ಚೋರಿ ಬ್ರಾಂಚ್‌’ ಆಗಿ ಬದಲಾಗಿದಿಯೇ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

22 ವರ್ಷಗಳ ನಂತರ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಇದರಲ್ಲಿ ಅನರ್ಹ, ಒಂದಕ್ಕಿಂತ ಹೆಚ್ಚು ಬಾರಿ ಹೆಸರಿರುವ ಹಾಗೂ ಕಾನೂನಿನ್ವಯ ಅರ್ಹ ಮತದಾರರ ಹೆಸರು ಸೇರಿಸುವ ಪ್ರಕ್ರಿಯೆಗೆ ಚುನಾವಣಾ ಆಯೋಗ ಮುನ್ನುಡಿ ಬರೆದಿದೆ.

ADVERTISEMENT

‘ಯುಟ್ಯೂಬರ್‌ ಅಜಿತ್ ಅಂಜುಮ್ ಅವರು ಬಿಹಾರದಲ್ಲಿ ಕೈಗೊಂಡಿರುವ SIR ಕುರಿತು ಸರಣಿ ವರದಿಗಳನ್ನು ಪ್ರಸಾರ ಮಾಡಿದ್ದರು. ಇವುಗಳನ್ನು ರಾಹುಲ್ ಗಾಂಧಿ ಮರುಹಂಚಿಕೊಂಡಿದ್ದು, ‘SIR ಹೆಸರಿನಲ್ಲಿ ಚುನಾವಣಾ ಆಯೋಗವು ಮತಗಳನ್ನು ಕದಿಯುವಾಗಲೇ ಸಿಕ್ಕಿಬಿದ್ದಿದೆ. ಈ ಸುದ್ದಿಯನ್ನು ಬಯಲಿಗೆ ತಂದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.

‘ಚುನಾವಣಾ ಆಯೋಗವು ಈಗಲೂ ಪಾರದರ್ಶಕ ಚುನಾವಣೆ ನಡೆಸುವ ಸಂಸ್ಥೆಯಾಗಿಯೇ ಉಳಿದಿದೆಯೇ ಅಥವಾ ಸಂಪೂರ್ಣವಾಗಿ ಬಿಜೆಪಿಯ ‘ಚುನಾವಣಾ ಕಳ್ಳತನ ಶಾಖೆ’ಯಾಗಿ ಬದಲಾಗಿದೆಯೇ’ ಎಂದು ರಾಹುಲ್ ಕೇಳಿದ್ದಾರೆ.

‘ಪೌರತ್ವ ದಾಖಲೆಗಳನ್ನೇ ಮುಂದಿಟ್ಟುಕೊಂಡು ಕೊಟ್ಯಂತರ ಅರ್ಹ ಭಾರತೀಯ ಮತದಾರರನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡುವ ಹುನ್ನಾರ ನಡೆಸಲಾಗಿದೆ’ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

‘ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ಅರ್ಹ ಮತದಾರರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದೀರಿ’ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಇತ್ತೀಚೆಗೆ ಹೇಳಿದ್ದರು.

ಬಿಹಾರ ವಿಧಾನಸಭೆಗೆ ಇದೇ ವರ್ಷ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಇದರ ಭಾಗವಾಗಿ ನಡೆದ SIR ಪ್ರಶ್ನಿಸಿ ವಿರೋಧ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಇದರ ಬೆನ್ನಲ್ಲೇ ಜ್ಞಾನೇಶ್ ಕುಮಾರ್‌ ಅವರು ಈ ಹೇಳಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.