
ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ನವೆಂಬರ್ 14ರಂದು ಹೊರಬೀಳಲಿದ್ದು, ಎಲ್ಲರ ಚಿತ್ತ ವಿದ್ಯುನ್ಮಾನ ಮತಯಂತ್ರಗಳತ್ತ (ಇವಿಎಂ) ನೆಟ್ಟಿದೆ.
ಮತದಾನದಲ್ಲಿ ಬಳಸಲಾದ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು ಸ್ಟ್ರಾಂಗ್ ರೂಮ್‌ಗಳಲ್ಲಿ ಇರಿಸಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. ಎರಡು ಹಂತದ ಭದ್ರತೆ ಕಲ್ಪಿಸಲಾಗಿದೆ ಎಂದು ಚುನಾವಣಾ ಆಯೋಗ (ಇಸಿ) ಬುಧವಾರ ತಿಳಿಸಿದೆ.
ಮತ ಎಣಿಕೆ ಪ್ರಕ್ರಿಯೆಯು ರಾಜ್ಯದ 38 ಜಿಲ್ಲೆಗಳ 46 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಟ್ರಾಂಗ್ ರೂಮ್‌ಗಳು ಇರುವ ಆವರಣದ ಒಳಗಿನ ಭದ್ರತೆಗೆ ಕೇಂದ್ರ ಸಶಸ್ತ್ರ ಅರೆಸೈನಿಕ ಪಡೆ (ಸಿಎಪಿಎಫ್) ನಿಯೋಜಿಸಲಾಗಿದ್ದು, ಹೊರಗೆ ಜಿಲ್ಲಾ ಪೊಲೀಸರನ್ನು ನಿಯೋಜಿಸಲಾಗಿದೆ. ಇದಲ್ಲದೆ, 24×7 ಸಿಸಿಟಿವಿ ಕಣ್ಗಾವಲು ಮತ್ತು ಇತರ ಭದ್ರತಾ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ
ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಗಳ ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ರಿಟರ್ನಿಂಗ್ ಅಧಿಕಾರಿಗಳು ಪ್ರತಿದಿನ ಸ್ಟ್ರಾಂಗ್ ರೂಮ್‌ಗಳನ್ನು ಪರಿಶೀಲಿಸುವಂತೆ ನಿರ್ದೇಶಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು 11ರಂದು ಎರಡು ಹಂತದಲ್ಲಿ ನಡೆದಿತ್ತು. 1951 ನಂತರ ಬಿಹಾರ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲಿ ಶೇ 66.91ರಷ್ಟು ಮತದಾನವಾಗಿದೆ.
ದಾಖಲೆಯ ಮತದಾನದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ. ಇದು ಮತದಾನದ ಬಗೆಗಿನ ರಾಜ್ಯದ ಮತದಾರರ ಅರಿವು ಎಂದು ಸಂಸದೀಯ ವ್ಯವಹಾರಗಳ ಸಚಿವ ಅಶೋಕ್ ಕುಮಾರ್ ಚೌಧರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.