
ಪಟ್ನಾದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಕೃಪೆ: ಪಿಟಿಐ
ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಪ್ರಮುಖ ಅಂಗಪಕ್ಷಗಳಾಗಿರುವ ಎನ್‌ಡಿಎ ಭರ್ಜರಿ ಜಯಗಳಿಸಿ, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇದರ ಬೆನ್ನಲ್ಲೇ, ಈ ಚುನಾವಣೆಯ ಫಲಿತಾಂಶ ನೆರೆಯ ಉತ್ತರ ಪ್ರದೇಶದ ರಾಜಕೀಯದ ಪರಿಣಾಮ ಬೀರಲಿದೆಯೇ ಎಂಬ ಚರ್ಚೆಗಳು ಶುರುವಾಗಿವೆ.
2027ರಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ನಿತೀಶ್ ಕುಮಾರ್ ಅವರಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ ಗೆದ್ದು ಬೀಗುವರೇ? ಇಲ್ಲ, ಅಧಿಕಾರ ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಬೆವರು ಹರಿಸಬೇಕಾಗುತ್ತದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ರಾಜಕೀಯ ಮೊಗಸಾಲೆಯಲ್ಲಿ ಇಂತಹ ಚರ್ಚೆಗಳು ನಡೆಯುವುದಕ್ಕೆ ಹಲವು ಕಾರಣಗಳೂ ಇವೆ. ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳು ಗಡಿಯನ್ನು ಮಾತ್ರ ಹಂಚಿಕೊಳ್ಳುವುದಿಲ್ಲ, ಅಲ್ಲಿನ ಭಾಷೆ, ಸಂಸ್ಕೃತಿ ಹಾಗೂ ಆಹಾರ ಪದ್ಧತಿಯಲ್ಲಿ ಸಾಕಷ್ಟು ಸಾಮ್ಯತೆಯೂ ಇದೆ.
ಈ ಎರಡೂ ರಾಜ್ಯಗಳು ಒಟ್ಟು 120 ಸಂಸದರನ್ನು ಲೋಕಸಭೆಗೆ ಕಳುಹಿಸುತ್ತವೆ. ಆದರೆ, ರಾಜಕೀಯ ವಿಷಯಕ್ಕೆ ಬಂದಾಗ ಈ ರಾಜ್ಯಗಳ ನಡುವಿನ ವ್ಯತ್ಯಾಸದ ಗೆರೆ ಢಾಳವಾಗಿಯೇ ಕಂಡುಬರುತ್ತದೆ.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಇಂಥ ವಿದ್ಯಮಾನ ಕಂಡುಬಂದಿದೆ. ಬಿಹಾರದಲ್ಲಿ ಎನ್‌ಡಿಎ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಉತ್ತರ ಪ್ರದೇಶದಲ್ಲಿ ಮಾತ್ರ ಬಿಜೆಪಿಯ ಲೆಕ್ಕಾಚಾರ ತಲೆಕೆಳಗಾಯಿತು. ಬಿಜೆಪಿಯ ಭದ್ರಕೋಟೆ ಎನಿಸಿದ್ದ ಪ್ರದೇಶಗಳಲ್ಲಿಯೂ ಕಾಂಗ್ರೆಸ್ ಹಾಗೂ ಆರ್‌ಜೆಡಿ ಗೆಲ್ಲುವ ಮೂಲಕ, ಲೋಕಸಭೆಯಲ್ಲಿ ಕೇಸರಿ ಪಕ್ಷದ ಸ್ಥಾನ ಕಡಿಮೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದವು.
ಬಿಹಾರದಲ್ಲಿ ಫಲ ಕೊಟ್ಟ ತಂತ್ರವೇನು?
ಬಿಹಾರದಲ್ಲಿ ಯಾದವೇತರ ಒಬಿಸಿ ಹಾಗೂ ಮಹಾದಲಿತರು ನಿತೀಶ್ ಕುಮಾರ್ ಅವರಲ್ಲಿ ಅಚಲ ನಿಷ್ಠೆ ತೋರುತ್ತಾ ಬಂದಿದ್ದಾರೆ. ಇದರಿಂದ ಜೆಡಿಯು ಬುಟ್ಟಿಗೆ ಶೇ 15ರಿಂದ ಶೇ20ರಷ್ಟು ಮತಗಳು ಅನಾಯಾಸವಾಗಿ ಬೀಳುತ್ತವೆ. ಬಿಜೆಪಿ ಜೊತೆ ಜೆಡಿಯು ಕೈಜೋಡಿಸಿದೆ. ಹೀಗಾಗಿ ಬಿಜೆಪಿಯನ್ನು ಬೆಂಬಲಿಸುತ್ತಿರುವ ಪ್ರಬಲ ಜಾತಿಗಳ ಮತಗಳು ಕೂಡ ಎನ್‌ಡಿಎ ಮೈತ್ರಿಕೂಟದ ಪಾಲಾಗುತ್ತವೆ. ಇದರಿಂದ ಎನ್‌ಡಿಎ ಮತ ಪ್ರಮಾಣ ಶೇ30ರ ಗಡಿ ದಾಟುವುದು ಕಷ್ಟವಾಗದು.
ಯಾದವೇತರರ ವಿಚಾರ ಬಂದಾಗ, ಉತ್ತರ ಪ್ರದೇಶದಲ್ಲಿನ ಪರಿಸ್ಥಿತಿಯೇ ಬೇರೆ. ಈ ಸಮುದಾಯಗಳ ಮತಗಳು ಬಿಎಸ್‌ಪಿ, ಎಸ್‌ಪಿ ಹಾಗೂ ಬಿಜೆಪಿ ನಡುವೆ ಹಂಚಿಹೋಗಿವೆ. ಕಳೆದ ಎರಡು ಚುನಾವಣೆಗಳಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಕಳಪೆ ಸಾಧನೆ ದಾಖಲಿಸಿದೆ. ಹೀಗಾಗಿ, ಈ ಸಮುದಾಯಗಳ ಮತ ಸೆಳೆಯಲು ಅಖಿಲೇಶ್ ಮತ್ತು ಯೋಗಿ ಆದಿತ್ಯನಾಥ ನಡುವೆ ನೇರ ಸ್ಪರ್ಧೆ ಇದೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಜೊತೆ ಮೈತ್ರಿ ಮಾಡಿಕೊಂಡವರಿಗೆ ಯಾದವೇತರ ಸಮುದಾಯಗಳ ಬೆಂಬಲ ಸಿಗುವಂತೆ, ಉತ್ತರ ಪ್ರದೇಶದಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳ ಬೆಂಬಲ ಪಡೆಯುವ ಪಕ್ಷಗಳು ಗೆಲ್ಲುವ ಸಾಧ್ಯತೆಯೇ ಹೆಚ್ಚು. 2017 ಹಾಗೂ 2022ರಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಇದು ಕಂಡುಬಂದಿದೆ.
ಈ ಚುನಾವಣೆಗಳಲ್ಲಿ ಬಿಜೆಪಿಯು ಈ ಸಮುದಾಯಗಳ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಸಣ್ಣ ಜಾತಿಗಳ ಬೆಂಬಲ ಇರುವ ಪಕ್ಷಗಳೊಂದಿಗೆ ಅಖಿಲೇಶ್ ಯಾದವ್ ಮೈತ್ರಿ ಮಾಡಿಕೊಂಡಿದ್ದರಿಂದ ಅವರಿಗೆ ನಿರೀಕ್ಷಿತ ಸ್ಥಾನಗಳು ಸಿಗಲಿಲ್ಲ.
2024ರ ಲೋಕಸಭೆ ವೇಳೆ, ಸಮಾಜವಾದಿ ಪಕ್ಷ (ಎಸ್‌ಪಿ) ತನ್ನ ತಂತ್ರಗಾರಿಕೆಯನ್ನು ಬದಲಿಸಿತು. ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಬೆಂಬಲ ಪಡೆಯಲು ಮುಂದಾಯಿತು. ಬಿಎಸ್‌ಪಿ ತೊರೆದು ಎಸ್‌ಪಿ ಸೇರಿದ್ದ ಅಭ್ಯರ್ಥಿಗಳು ಗೆದ್ದರು. ಈ ತಂತ್ರದ ಫಲವಾಗಿ ‘ಇಂಡಿಯಾ’ ಒಕ್ಕೂಟದ ಸಂಸದರ ಬಲ 43ಕ್ಕೆ ಏರಿತು. ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.