ADVERTISEMENT

Bihar Polls: ಪ್ರಣಾಳಿಕೆ ಬಿಡುಗಡೆ ಮಾಡಿದ ಇಂಡಿಯಾ ಮೈತ್ರಿಕೂಟ

ಪಿಟಿಐ
Published 28 ಅಕ್ಟೋಬರ್ 2025, 13:13 IST
Last Updated 28 ಅಕ್ಟೋಬರ್ 2025, 13:13 IST
<div class="paragraphs"><p>ಪ್ರಣಾಳಿಕೆ ಬಿಡುಗಡೆ ಮಾಡಿದ ಇಂಡಿಯಾ ಒಕ್ಕೂಟ</p></div>

ಪ್ರಣಾಳಿಕೆ ಬಿಡುಗಡೆ ಮಾಡಿದ ಇಂಡಿಯಾ ಒಕ್ಕೂಟ

   

ಪಿಟಿಐ ಚಿತ್ರ

ನವದೆಹಲಿ: ಮಹಾಮೈತ್ರಿಕೂಟ ಸರ್ಕಾರ ರಚನೆಯಾದ 20 ದಿನಗಳಲ್ಲೇ, ರಾಜ್ಯದ ಪ್ರತಿ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲು ಕಾಯ್ದೆ ಅಂಗೀಕರಿಸಲಾಗುವುದು. ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಲಾಗುವುದು. 

ADVERTISEMENT

ಬಿಹಾರ ವಿಧಾನಸಭಾ ಚುನಾವಣೆಗೆ ಮಹಾಮೈತ್ರಿಕೂಟ ಮಂಗಳವಾರ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳಿವು. 

‘ಮಾಯ್-ಬೆಹಿನ್‌ ಮಾನ್’ ಯೋಜನೆಯಡಿ ಡಿಸೆಂಬರ್ 1ರಿಂದ ಮಹಿಳೆಯರು ತಿಂಗಳಿಗೆ ₹2,500  ಮತ್ತು ಮುಂದಿನ ಐದು ವರ್ಷಗಳವರೆಗೆ ವರ್ಷಕ್ಕೆ ₹30,000  ಆರ್ಥಿಕ ಸಹಾಯ ಪಡೆಯಲಿದ್ದಾರೆ. ಪ್ರತಿ ಕುಟುಂಬವು 200 ಯೂನಿಟ್ ಉಚಿತ ವಿದ್ಯುತ್ ಪಡೆಯಲಿದೆ ಎಂದು ಮೈತ್ರಿಕೂಟವು ಭರವಸೆ ನೀಡಿದೆ. 

ಪ್ರಣಾಳಿಕೆಯು ಐಟಿ ಪಾರ್ಕ್, ವಿಶೇಷ ಆರ್ಥಿಕ ವಲಯಗಳು (ಎಸ್‌ಇಜೆಡ್‌ಗಳು), ಡೇರಿ ಆಧಾರಿತ ಕೈಗಾರಿಕೆಗಳು, ಐದು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ 25 ಅಂಶಗಳನ್ನು ಒಳಗೊಂಡಿದೆ.

ಸರ್ಕಾರ ರಚನೆಯಾದ 20 ತಿಂಗಳಲ್ಲಿ ರಾಜ್ಯದಾದ್ಯಂತ ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಲಾಗುತ್ತದೆ. ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸೇಂದಿ ಮೇಲಿನ ನಿಷೇಧ ತೆಗೆದುಹಾಕಲಾಗುವುದು. ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿರುವ ಎಲ್ಲ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲಾಗುವುದು ಎಂದು ಮೈತ್ರಿಕೂಟ ವಾಗ್ದಾನ ನೀಡಿದೆ. 

ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ, ಉಪಮುಖ್ಯಮಂತ್ರಿ ಅಭ್ಯರ್ಥಿ ಮುಕೇಶ್ ಸಹಾನಿ, ಸಿಪಿಐ (ಎಂಎಲ್) (ಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಮತ್ತು ಮೈತ್ರಿಕೂಟದ ಇತರ ನಾಯಕರು ಜಂಟಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದರು.

ತೇಜಸ್ವಿ ಯಾದವ್‌ ಮಾತನಾಡಿ, ‘ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರದ ಯಾವುದೇ ಕಚೇರಿಗೆ ಹೋದರೂ ಲಂಚ ನೀಡದೆ ಯಾವುದೇ ಕೆಲಸ ಆಗುವುದಿಲ್ಲ. ರಾಜ್ಯದ ಜನರು ಅಪರಾಧ ಮುಕ್ತ, ಹಗರಣ ಮುಕ್ತ ಆಡಳಿತ ಬಯಸುತ್ತಿದ್ದಾರೆ. ಬಿಹಾರವನ್ನು ನಂಬರ್‌ 1 ರಾಜ್ಯವನ್ನಾಗಿ ಮಾಡುವುದೇ ತಮ್ಮ ಗುರಿ‘ ಎಂದರು. 

‘ಮುಸ್ಲಿಂ ಸಿ.ಎಂ ಯಾಕಾಗಬಾರದು?’

ಗೋಪಾಲಗಂಜ್: ಕೇವಲ ಶೇ 3ರಷ್ಟು ಜನಸಂಖ್ಯೆ ಯಿರುವ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನದ ಭರವಸೆ ನೀಡುವುದಾದರೆ, ಶೇ 17ರಷ್ಟು ಜನಸಂಖ್ಯೆಯಿರುವ ಮುಸ್ಲಿ‌ಮರ ಪ್ರತಿನಿಧಿ ರಾಜ್ಯದ ಮುಖ್ಯಮಂತ್ರಿ ಯಾಕಾಗಬಾರದು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಮಂಗಳವಾರ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.